ADVERTISEMENT

ತೈಲ ಕಂಪನಿಗಳಿಗೆ ₹30,000 ಕೋಟಿ ಸಬ್ಸಿಡಿ: ಕಾರಣ ಏನು?

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 0:42 IST
Last Updated 9 ಆಗಸ್ಟ್ 2025, 0:42 IST
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್   

ನವದೆಹಲಿ: ನಿಯಂತ್ರಿತ ಬೆಲೆಯಲ್ಲಿ ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪೂರೈಸಿದ್ದಕ್ಕಾಗಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗೆ ಪರಿಹಾರವಾಗಿ ₹30,000 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ.

ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶಗಳು, ತೈಲ ಮತ್ತು ಅನಿಲ ವಲಯದಲ್ಲಿನ ಅನಿಶ್ಚಿತತೆ ಗಮನದಲ್ಲಿಟ್ಟುಕೊಂಡು ಈ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು. ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕ ಒತ್ತಡ ಹೇರುತ್ತಿರುವುದರಿಂದ ಭಾರತದಲ್ಲಿ ಇಂಧನ ಬೆಲೆಗಳು ಹೆಚ್ಚಳವಾಗುವ ನಿರೀಕ್ಷೆ ಇದೆ. 

ಕಳೆದ 15 ತಿಂಗಳುಗಳಲ್ಲಿ ಕಡಿಮೆ ಬೆಲೆಗೆ ಎಲ್‌ಪಿಜಿ ಮಾರಾಟ ಮಾಡಿರುವುದರಿಂದ ಉಂಟಾದ ನಷ್ಟ ಸರಿದೂಗಿಸಲು ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳಿಗೆ 12 ಕಂತುಗಳಲ್ಲಿ ಈ ಮೊತ್ತ ಪಾವತಿಸಲಾಗುವುದು.

ADVERTISEMENT

2024-25ರಲ್ಲಿ ಎಲ್‌ಪಿಜಿಯ ಅಂತರರಾಷ್ಟ್ರೀಯ ಬೆಲೆ ಗರಿಷ್ಠ ಮಟ್ಟದಲ್ಲಿದ್ದವು. ಆದಾಗ್ಯೂ, ದೇಶದಲ್ಲಿ ಎಲ್‌ಪಿಜಿ ಬೆಲೆ ಹೆಚ್ಚಳವಾಗದಂತೆ ನೋಡಿಕೊಳ್ಳಲಾಗಿತ್ತು. ಇದರಿಂದಾಗಿ, ಮೂರು ಕಂಪನಿಗಳು ಗಮನಾರ್ಹ ನಷ್ಟ ಅನುಭವಿಸಿದ್ದವು. ಈ ಸಬ್ಸಿಡಿಯಿಂದಾಗಿ ಕಚ್ಚಾ ತೈಲ ಮತ್ತು ಎಲ್‌ಪಿಜಿ ಖರೀದಿ, ಸಾಲ ಮರುಪಾವತಿ ಮತ್ತು ಬಂಡವಾಳ ವೆಚ್ಚದಂತಹ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕಂಪನಿಗಳಿಗೆ ಅನುಕೂಲವಾಗಲಿದೆ. ಇದರಿಂದಾಗಿ ದೇಶದಾದ್ಯಂತ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳ ನಿರಂತರ ಪೂರೈಕೆ ಖಚಿತಪಡಿಸಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು. 

ಉಜ್ವಲ ಯೋಜನೆಗೆ ₹12,000 ಕೋಟಿ

2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ₹12,000 ಕೋಟಿ ಸಬ್ಸಿಡಿ ನೀಡಲು ಸಂಪುಟ ಅನುಮೋದಿಸಿದೆ.

ದೇಶದಾದ್ಯಂತ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಉಚಿತ ಏಲ್‌ಪಿಜಿ ಸಂಪರ್ಕ ಒದಗಿಸಲು ಈ ಯೋಜನೆಯನ್ನು 2016ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿ ದೇಶದಲ್ಲಿ 10.33 ಕೋಟಿ ಸಂಪರ್ಕಗಳಿವೆ.

ಈ ಯೋಜನೆಯ ಫಲಾನುಭವಿಗಳಿಗೆ 14.2 ಕೆಜಿ ಸಿಲಿಂಡರ್‌ಗೆ ವರ್ಷಕ್ಕೆ 9 ಪುನರ್ ಭರ್ತಿಗೊಳಿಸುವಿಕೆ (ಮತ್ತು 5 ಕೆ.ಜಿ ಸಿಲಿಂಡರ್‌ಗೆ ಅನುಗುಣವಾದ ಅನುಪಾತದಲ್ಲಿ) ₹300 ಸಬ್ಸಿಡಿ ನೀಡುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ವೈಷ್ಣವ್‌ ತಿಳಿಸಿದರು. 

ಭಾರತವು ತನ್ನ ಎಲ್‌ಪಿಜಿಯ ಅಗತ್ಯದ ಸುಮಾರು 60 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ.

ತಾಂತ್ರಿಕ ಸಂಸ್ಥೆಗಳ ಸುಧಾರಣೆಗೆ ಅನುದಾನ

175 ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು 100 ಪಾಲಿಟೆಕ್ನಿಕ್‌ಗಳನ್ನು ಒಳಗೊಂಡಿರುವ 275 ತಾಂತ್ರಿಕ ಸಂಸ್ಥೆಗಳಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಸಂಶೋಧನಾ ಸುಧಾರಣೆ  ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ಕೊಟ್ಟಿದೆ. 

ಈ ಯೋಜನೆಗೆ 2025-26 ರಿಂದ 2029-30ರವರೆಗೆ ₹4,200 ಕೋಟಿ ವೆಚ್ಚ ಮಾಡಲಾಗುತ್ತದೆ. ಇದರಲ್ಲಿ ₹2,100 ಕೋಟಿಯನ್ನು ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.