ADVERTISEMENT

ಸರ್ಕಾರಿ ಉದ್ಯೋಗಗಳಿಗೆ ಸಾಮಾನ್ಯ ಪರೀಕ್ಷೆ ನಡೆಸಲು ರಾಷ್ಟ್ರೀಯ ನೇಮಕಾತಿ ಏಜೆನ್ಸಿ

ಕೇಂದ್ರ ಸಚಿವ ಸಂಪುಟ ಅಸ್ತು

ಪಿಟಿಐ
Published 20 ಆಗಸ್ಟ್ 2020, 6:11 IST
Last Updated 20 ಆಗಸ್ಟ್ 2020, 6:11 IST
ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ – ಪ್ರಜಾವಾಣಿ ಸಂಗ್ರಹ ಚಿತ್ರ
ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ – ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು ‘ರಾಷ್ಟ್ರೀಯ ನೇಮಕಾತಿ ಏಜೆನ್ಸಿ (ಎನ್‌ಆರ್‌ಎ)’ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

‘ಎನ್‌ಆರ್‌ಎಯಿಂದ ಉದ್ಯೋಗ ಹುಡುಕಾಟ ನಡೆಸುವವರಿಗೆ ಅನುಕೂಲವಾಗಲಿದೆ. ಹಲವು ಪರೀಕ್ಷೆಗಳನ್ನು ಬರೆದು ಸಮಯ ಹಾಳಾಗುವುದು ತಪ್ಪಲಿದೆ ಹಾಗೂ ಖರ್ಚೂ ಕಡಿಮೆಯಾಗಲಿದೆ. ಒಂದು ಸಾಮಾನ್ಯ ಪರೀಕ್ಷೆ ಬರೆದರೆ ಸಾಕಾಗಲಿದೆ. ಇದೊಂದು ಐತಿಹಾಸಿಕ ನಿರ್ಧಾರ’ ಎಂದು ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಇದು ಯುವಕರ ಹಲವು ವರ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಈಗ ನೆರವೇರಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ದೇಶದ ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಕ ಮತ್ತು ಮಹತ್ವದ ಸುಧಾರಣೆ’ ಎಂದು ಸಚಿವ ಜಿತೇಂದ್ರ ಸಿಂಗ್ ಬಣ್ಣಿಸಿದ್ದಾರೆ. ಇದರಿಂದ ಉದ್ಯೋಗ ನೇಮಕಾತಿ ಪರೀಕ್ಷೆ ಬರೆಯುವುದಕ್ಕೆ ದೂರ ಪ್ರಯಾಣ ಮಾಡುವ ಬಡವರಿಗೆ ಮತ್ತು ಮಹಿಳೆಯರಿಗೂ ಅನುಕೂಲವಾಗಲಿದೆ’ ಎಂದೂ ಅವರು ಹೇಳಿದ್ದಾರೆ.

ಏಜೆನ್ಸಿಯು ಬಿ ಮತ್ತು ಸಿ (ತಾಂತ್ರಿಕೇತರ ಹುದ್ದೆಗಳು) ದರ್ಜೆಯ ಉದ್ಯೋಗ ಅಭ್ಯರ್ಥಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಿ ಕಿರುಪಟ್ಟಿ ಸಿದ್ಧಪಡಿಸಲಿದೆ. ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ರೈಲ್ವೆ ನೇಮಕಾತಿ ಮಂಡಳಿ ಮತ್ತು ಐಬಿಪಿಎಸ್‌ ಪ್ರತಿನಿಧಿಗಳನ್ನು ಎನ್‌ಆರ್‌ಎ ಹೊಂದಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.