ADVERTISEMENT

ಪೂರ್ವ ಪ್ರಾಥಮಿಕದಿಂದ 8ನೇ ತರಗತಿವರೆಗೆ ಬಿಸಿಯೂಟ: ‘ಪಿಎಂ ಪೋಷಣ್’ ಯೋಜನೆಗೆ ಅಸ್ತು

11.20 ಲಕ್ಷ ಪ್ರಾಥಮಿಕ ಶಾಲೆಗಳ 11.80 ಕೋಟಿ ಮಕ್ಕಳಿಗೆ ಬಿಸಿಯೂಟ

ಪಿಟಿಐ
Published 29 ಸೆಪ್ಟೆಂಬರ್ 2021, 19:23 IST
Last Updated 29 ಸೆಪ್ಟೆಂಬರ್ 2021, 19:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶದಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಒದಗಿಸುವ ‘ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು.

‘ಪ್ರಸ್ತುತ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ‘ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌’ ಯೋಜನೆಯಲ್ಲಿ ವಿಲೀನಗೊಳಿಸಲಾಗುವುದು. 2021–22ರಿಂದ 2025–26 ವರೆಗೆ ಇದು ಜಾರಿಯಲ್ಲಿರುವುದು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರು ಸಭೆ ಬಳಿಕ ತಿಳಿಸಿದರು.

ADVERTISEMENT

‘ದೇಶದ 11.20 ಲಕ್ಷ ಶಾಲೆಗಳ 11.80 ಕೋಟಿ ಮಕ್ಕಳಿಗೆ ಈ ಯೋಜನೆಯ ಲಾಭ ಸಿಗಲಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದರು.

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಸೇರಿದಂತೆ ಹಲವಾರು ಹೊಸ ಅಂಶಗಳನ್ನು ಯೋಜನೆ ಒಳಗೊಂಡಿದೆ. ಹಬ್ಬ ಹಾಗೂ ವಿಶೇಷ ದಿನಗಳಂದು ಜನರು ಶಾಲಾ ಮಕ್ಕಳಿಗೆ ವೈವಿಧ್ಯವಾದ ಊಟ ನೀಡಲು ಅವಕಾಶ ನೀಡುವ ವಿಶೇಷ ಕಾರ್ಯಕ್ರಮವನ್ನು ಈ ಯೋಜನೆ ಒಳಗೊಂಡಿದೆ.

ಶಾಲೆಗಳಲ್ಲಿರುವ ಕೈತೋಟಗಳಲ್ಲಿ ಬೆಳೆದ ತರಕಾರಿ, ಬೆಳೆಗಳನ್ನು ಬಳಸಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವುದು, ಸಾಂಪ್ರದಾಯಿಕ ಅಡುಗೆ ಸ್ಪರ್ಧೆ ಆಯೋಜನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಯೋಜನೆ ಅನುಷ್ಠಾನದಲ್ಲಿ ಕೃಷಿಕರ ಸಂಘಟನೆಗಳು (ಎಫ್‌ಪಿಒ) ಹಾಗೂ ಮಹಿಳಾ ಸ್ವಸಹಾಯ ಸಂಘಗಳನ್ನು ಸಹ ತೊಡಗಿಸಲಾಗುತ್ತದೆ.

‘ಒಟ್ಟು ₹ 1,30,794.90 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ’ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

‘ಈ ಯೋಜನೆಗೆ 5 ವರ್ಷಗಳಲ್ಲಿ ಕೇಂದ್ರವು ₹54,061.73 ಕೋಟಿ ನೀಡಲಿದ್ದರೆ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ₹31,733.17 ಕೋಟಿ ಭರಿಸಬೇಕು. ಆಹಾರ ಧಾನ್ಯಗಳಿಗೆ ತಗಲುವ ಹೆಚ್ಚುವರಿ ವೆಚ್ಚ ₹45,000 ಕೋಟಿಯನ್ನು ಕೇಂದ್ರವೇ ಭರಿಸಲಿದೆ’ ಎಂದೂ ಕೇಂದ್ರ ತಿಳಿಸಿದೆ.

***

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 8 ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಬಿಸಿಯೂಟ ಒದಗಿಸಲಾಗುವುದು.

- ಅನುರಾಗ್‌ ಠಾಕೂರ್‌, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.