ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸುಮಿತ್ ರಾಯ್ ವಿರುದ್ಧ 6 ವಾರ ಕ್ರಮ ಬೇಡ –ಹೈಕೋರ್ಟ್

ಪಿಟಿಐ
Published 12 ನವೆಂಬರ್ 2021, 9:39 IST
Last Updated 12 ನವೆಂಬರ್ 2021, 9:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಿತ್‌ ರಾಯ್‌ ಅವರ ವಿರುದ್ಧ ಆರು ವಾರ ಯಾವುದೇ ಕ್ರಮ ಜರುಗಿಸಬಾರದು ಎಂದು ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿದೆ.

ಇ.ಡಿ ಅಧಿಕಾರಿಗಳು ತನಿಖೆಗೆ ಹಾಜರಾಗಲು ಸೂಚಿಸಿದಾಗ ವ್ಯಕ್ತಿಗತವಾಗಿ ಅಥವಾ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು ಎಂದೂ ರಾಯ್‌ ಅವರಿಗೆ ಹೈಕೋರ್ಟ್‌ ಸೂಚಿಸಿತು. ಸುಮಿತ್‌ ರಾಯ್‌ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯದರ್ಶಿ.

ಈ ಸಂಬಂಧ ಆರು ವಾರಗಳಲ್ಲಿ ಇ.ಡಿ ಪ್ರಮಾಣಪತ್ರ ಸಲ್ಲಿಸಬೇಕು ಹಾಗೂ ಅರ್ಜಿದಾರರೂ ತಮ್ಮ ಪ್ರತಿಕ್ರಿಯೆ ದಾಖಲಿಸಬೇಕು ಎಂದು ಕೋರ್ಟ್‌ ನವೆಂಬರ್ 9ರಂದು ನೀಡಿದ್ದ ಆದೇಶದಲ್ಲಿ ತಿಳಿಸಿದೆ. ಅಲ್ಲಿಯವರೆಗೂ ಕಟ್ಟುನಿಟ್ಟಿನ ಕ್ರಮ ಜರುಗಿಸಬಾರದು ಎಂದು ನ್ಯಾಯಮೂರ್ತಿ ಶಿವಕಾಂತ್‌ ಪ್ರಸಾದ್ ಅವರು ಆದೇಶಿಸಿದ್ದಾರೆ.

ADVERTISEMENT

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಕಾಯ್ದೆಯಡಿ ತನಿಖೆಗೆ ಸಹಕರಿಸಲು ಸೂಚಿಸಿ ತಮಗೆ ಜಾರಿ ಮಾಡಿದ್ದ ಸಮನ್ಸ್‌ನ ಸಿಂಧುತ್ವವನ್ನೇ ಪ್ರಶ್ನಿಸಿ ಸುಮಿತ್‌ ರಾಯ್ ಅವರು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.