ADVERTISEMENT

ಪ. ಬಂಗಾಳ ಬಾಲಕಿ ಅತ್ಯಾಚಾರ ಪ್ರಕರಣ: ಸಿಬಿಐ ತನಿಖೆಗೆ ಕಲ್ಕತ್ತ ಹೈಕೋರ್ಟ್ ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2022, 16:18 IST
Last Updated 12 ಏಪ್ರಿಲ್ 2022, 16:18 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತಂತೆ ಸಿಬಿಐ ತನಿಖೆಗೆ ಕಲ್ಕತ್ತ ಹೈಕೋರ್ಟ್ ಆದೇಶಿಸಿದೆ.

ಕಸ್ಟಡಿಯಲ್ಲಿರುವ ಆರೋಪಿಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸ್ಥಳೀಯ ಪೊಲೀಸರಿಗೆ ಕೋರ್ಟ್ ತಾಕೀತು ಮಾಡಿದೆ.

ಮುಂದಿನ ವಿಚಾರಣೆ ವೇಳೆ ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.

ADVERTISEMENT

‘ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಇತ್ತೀಚೆಗೆ ಹುಟ್ಟುಹಬ್ಬ ಸಮಾರಂಭವೊಂದರಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಅತ್ಯಾಚಾರದ ಬಳಿಕ ಸಂತ್ರಸ್ತೆ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ಹೇಳಿದ್ದರು.

ಘಟನೆ ಬಳಿಕ, ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ಪಕ್ಷದ ಪಂಚಾಯಿತಿ ಸದಸ್ಯನ ಮಗ ಎಂದು ಬಾಲಕಿಯ ಕುಟುಂಬ ಆರೋಪಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘9ನೇ ತರಗತಿ ಓದುತ್ತಿದ್ದ ಬಾಲಕಿ ಇತ್ತೀಚೆಗೆ ಆರೋಪಿಯ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ಆತನ ಮನೆಗೆ ಹೋಗಿದ್ದಳು. ಆದರೆ ಅವಳು ಅಸ್ವಸ್ಥಳಾಗಿ ಮನೆಗೆ ಮರಳಿದ್ದಳು. ನಂತರ ಮೃತಪಟ್ಟಿದ್ದಾಳೆ’ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಸ್ಥಳೀಯ ಟಿಎಂಸಿ ನಾಯಕನ ಮಗನ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿ ಹಿಂದಿರುಗಿದ ನಮ್ಮ ಮಗಳಿಗೆ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಆಕೆ ಮೃತಪಟ್ಟಿದ್ದಾಳೆ’ಎಂದು ಪೋಷಕರು ಆರೋಪಿಸಿದ್ದಾರೆ.

‘ಆರೋಪಿ ಮತ್ತು ಅವನ ಸ್ನೇಹಿತರು ನಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬುದು ಹಲವರನ್ನು ವಿಚಾರಿಸಿದ ಬಳಿಕ ನಮಗೆ ಖಚಿತವಾಗಿದೆ‘ ಎಂದು ಬಾಲಕಿ ತಾಯಿ ಸುದ್ದಿಗಾರರಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.