ಕಲ್ಕತ್ತ ಹೈಕೋರ್ಟ್
ಕೋಲ್ಕತ್ತ: ಇಬ್ಬರು ಮಹಿಳೆಯರು ಮತ್ತು ಅವರ ಕುಟುಂಬಸ್ಥರನ್ನು ‘ಅಕ್ರಮ ವಲಸಿಗರು’ ಎಂದು ತೀರ್ಮಾನಿಸಿ ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶದ ಬೀರ್‌ಭೂಮ್ ಜಿಲ್ಲೆಗೆ ಗಡಿಪಾರು ಮಾಡಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕಲ್ಕತ್ತ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ.
ಸೋನಾಲ್ ಬೀಬಿ, ಸ್ವೀಟಿ ಬೀಬಿ ಮತ್ತು ಕುಟುಂಬದ ಇತರ ನಾಲ್ವರು ಸದಸ್ಯರನ್ನು ಒಂದು ತಿಂಗಳ ಒಳಗಾಗಿ ಭಾರತಕ್ಕೆ ಮರಳಿ ಕರೆತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಶುಕ್ರವಾರ ನೀಡಿರುವ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂಬ ಕೇಂದ್ರ ಸರ್ಕಾರದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಎರಡೂ ಕುಟುಂಬದ ಸದಸ್ಯರು ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 26ರಲ್ಲಿ ದಿನಗೂಲಿ ಕಾರ್ಮಿಕರಾಗಿ ಎರಡು ದಶಗಳಿಂದ ಕೆಲಸ ಮಾಡುತ್ತಿದ್ದರು. ಎಎನ್ ಕಾಟ್ಜು ಮಾರ್ಗದ ಪೊಲೀಸರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಶಂಕೆಯ ಮೇಲೆ ಜೂನ್ 18ರಂದು ಬಂಧಿಸಿದ್ದರು. ನಂತರ ಜೂನ್ 27ರಂದು ಅವರನ್ನು ಗಡಿಪಾರು ಮಾಡಲಾಗಿತ್ತು.
ಪೌರತ್ವಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಲ್ಲಿಸಿದ್ದರೂ ಗಡಿಪಾರು ಮಾಡಿರುವುದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.