ADVERTISEMENT

ಅತ್ಯಾಚಾರ ಕುರಿತ ಮಹಿಳಾ ಆಯೋಗದ ಸದಸ್ಯೆ ಹೇಳಿಕೆಗೆ ಪ್ರಿಯಾಂಕಾ ಕೆಂಡಾಮಂಡಲ

ಏಜೆನ್ಸೀಸ್
Published 8 ಜನವರಿ 2021, 14:17 IST
Last Updated 8 ಜನವರಿ 2021, 14:17 IST
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ   

ನವದೆಹಲಿ: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ನೀಡಿರುವ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಆಯೋಗದ ಸದಸ್ಯೆಯ ಇಂತಹ ನಡುವಳಿಕೆಯಿಂದ ಮಹಿಳೆಯರ ಸುರಕ್ಷತೆಯನ್ನು ನಾವು ಖಾತ್ರಿಪಡಿಸಿಕೊಳ್ಳಬಹುದೇ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಬುಡಾನ್‌ ಜಿಲ್ಲೆಯಲ್ಲಿ ಜನವರಿ 3ರಂದು 50 ವರ್ಷದ ಅಂಗನವಾಡಿ ಕಾರ್ಯಕರ್ತೆ ಮೇಲೆ ಅರ್ಚಕ ಮತ್ತು ಆತನ ಇಬ್ಬರು ಸಹಾಯಕರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು.

ADVERTISEMENT

ಸಂತ್ರಸ್ತ ಮಹಿಳೆಯು ಸಾಯಂಕಾಲ ಒಬ್ಬಂಟಿಯಾಗಿ ಮನೆಯಿಂದ ಹೊರಹೋಗದಿದ್ದರೆ ಅತ್ಯಾಚಾರವನ್ನು ತಪ್ಪಿಸಬಹುದಿತ್ತು ಎಂದು ಚಂದ್ರಮುಖಿ ದೇವಿ ವಿವಾದಿತ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, 'ಇಂತಹ ನಡವಳಿಕೆಯಿಂದ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಿದೆಯೇ? ಮಹಿಳಾ ಆಯೋಗದ ಸದಸ್ಯರು ಅತ್ಯಾಚಾರಕ್ಕೆ ಒಳಗಾದವರನ್ನು ದೂಷಿಸುತ್ತಿದ್ದಾರೆ. ಸಂತ್ರಸ್ತೆಯ ಮರಣೋತ್ತರ ಫಲಿತಾಂಶವನ್ನು ಯಾರು ಸೋರಿಕೆ ಮಾಡಿದ್ದಾರೆ ಎಂಬುದರ ಬಗ್ಗೆ ಬುಡಾನ್ ಆಡಳಿತವು ತಲೆಕೆಡಿಸಿಕೊಂಡಿದೆ' ಎಂದು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿರುವ ಮತ್ತೊಂದು ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿರುವ ಪ್ರಿಯಾಂಕಾ, 'ಈ ಆಡಳಿತ ವ್ಯವಸ್ಥೆಯು ಮಹಿಳೆಯರಿಗೆ ಮಾಡಿರುವ ಅವಮಾನವನ್ನು ಎಂದಿಗೂ ಕ್ಷಮಿಸಲಾಗದು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.