ADVERTISEMENT

ಕೆನಡಾ ಮೂಲದ ಬಬ್ಬರ್ ಖಾಲ್ಸಾ ಕಾರ್ಯಕರ್ತ ಲಾಂಡಾ ಭಯೋತ್ಪಾದಕ ಎಂದು ಘೋಷಿಸಿದ ಸರ್ಕಾರ

ಪಿಟಿಐ
Published 31 ಡಿಸೆಂಬರ್ 2023, 6:11 IST
Last Updated 31 ಡಿಸೆಂಬರ್ 2023, 6:11 IST
ಭಯೋತ್ಪಾದಕ
ಭಯೋತ್ಪಾದಕ   

ನವದೆಹಲಿ: ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ಕೆನಡಾ ಮೂಲದ ಕಾರ್ಯಕರ್ತ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಎಂದು ಕೇಂದ್ರ ಸರ್ಕಾರವು ಘೋಷಿಸಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ಮೇ 2022ರಲ್ಲಿ ಪಂಜಾಬ್ ಪೊಲೀಸ್‌ನ ಗುಪ್ತಚರ ಶಾಖೆಯ ಕಚೇರಿ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯಲ್ಲಿ ಸಿಂಗ್ ಭಾಗಿಯಾಗಿದ್ದರು. ಜೊತೆಗೆ, ದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಗಡಿಯುದ್ದಕ್ಕೂ ಐಇಡಿಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಪೂರೈಸಿದ್ದರು.

ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಹರಿಕೆ ಮೂಲದ ಸಿಂಗ್, ಪ್ರಸ್ತುತ ಕೆನಡಾದ ಆಲ್ಬರ್ಟಾದ ಎಡ್ಮಂಟನ್‌ನಲ್ಲಿ ನೆಲೆಸಿದ್ದಾರೆ. ಅವರು ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ಕಾರ್ಯಕರ್ತರಾಗಿದ್ದಾರೆ.

ADVERTISEMENT

ಭಯೋತ್ಪಾದನಾ ಘಟಕಗಳನ್ನು ಸಂಘಟಿಸುವುದು, ಸುಲಿಗೆ, ಹತ್ಯೆ, ಐಇಡಿಗಳನ್ನು ಪ್ಲಾಂಟ್ ಮಾಡುವುದು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಹಾಗೂ ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣದ ನೆರವು ನೀಡುವುದು ಸೇರಿದಂತೆ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಅವರು ಭಾಗಿಯಾಗಿದ್ದಾರೆ.

ಸಿಂಗ್ ಮತ್ತು ಅವರ ಸಹಚರರು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉದ್ದೇಶಿತ ಹತ್ಯೆಗಳು, ಸುಲಿಗೆಗಳು ಮತ್ತು ಇತರ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.

‘ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ನಂಬುತ್ತದೆ ಮತ್ತು ಅವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ನಾಲ್ಕನೇ ಶೆಡ್ಯೂಲ್‌ನಲ್ಲಿ ಭಯೋತ್ಪಾದಕ ೆಂದು ಘೋಷಿಸಲಾಗುತ್ತದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.