ADVERTISEMENT

ಸುಪ್ರೀಂ ಕೋರ್ಟ್‌ನಿಂದ ಅಣ್ವಸ್ತ್ರ ಕ್ಷಿಪಣಿ: ಉಪರಾಷ್ಟ್ರಪತಿ ಧನಕರ್‌ ಆಕ್ಷೇಪ

ರಾಷ್ಟ್ರಪತಿಗೆ ಕಾಲಮಿತಿ ವಿಧಿಸಿದ್ದಕ್ಕೆ ಧನಕರ್ ಆಕ್ಷೇಪ

ಪಿಟಿಐ
Published 17 ಏಪ್ರಿಲ್ 2025, 15:47 IST
Last Updated 17 ಏಪ್ರಿಲ್ 2025, 15:47 IST
<div class="paragraphs"><p>ಉಪ ರಾಷ್ಟ್ರಪತಿ ಜಗದೀಪ್ ಧನಕರ್ </p></div>

ಉಪ ರಾಷ್ಟ್ರಪತಿ ಜಗದೀಪ್ ಧನಕರ್

   

–ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರಪತಿಯವರು ತೀರ್ಮಾನ ಕೈಗೊಳ್ಳುವುದಕ್ಕೆ ನ್ಯಾಯಾಂಗವು ಕಾಲಮಿತಿ ವಿಧಿಸಿರುವುದಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಂಸತ್ತಿಗೂ ಮಿಗಿಲಾಗಿರುವ ವರ್ತಿನೆ’ಯನ್ನು ಪ್ರಶ್ನಿಸಿರುವ ಅವರು, ಪ್ರಜಾತಾಂತ್ರಿಕ ಶಕ್ತಿಗಳನ್ನು ಗುರಿಯಾಗಿಸಿಕೊಂಡು ಸುಪ್ರೀಂ ಕೋರ್ಟ್‌ ‘ಅಣ್ವಸ್ತ್ರ ಕ್ಷಿಪಣಿ’ ಪ್ರಯೋಗಿಸುವಂತಿಲ್ಲ’ ಎಂದಿದ್ದಾರೆ.

ADVERTISEMENT

ರಾಜ್ಯಸಭೆಯ ತರಬೇತಿನಿರತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಈ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗೆ ಕಳುಹಿಸುವ ಮಸೂದೆಗಳ ವಿಚಾರವಾಗಿ ಮೂರು ತಿಂಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ಈ ಮಾತು ಬಂದಿದೆ.

‘ಕಾನೂನು ರೂಪಿಸುವ, ಕಾರ್ಯಾಂಗದ ಕೆಲಸಗಳನ್ನು ಮಾಡುವ, ಸಂಸತ್ತಿಗಿಂತ ಮಿಗಿಲಾಗಿ ವರ್ತಿಸುವ ಮತ್ತು ಯಾವ ಉತ್ತರದಾಯಿತ್ವವೂ ಇರದ ನ್ಯಾಯಮೂರ್ತಿಗಳನ್ನು ನಾವು ಹೊಂದಿದ್ದೇವೆ. ಏಕೆಂದರೆ ದೇಶದ ಕಾನೂನು ಅವರಿಗೆ ಅನ್ವಯವಾಗುವುದಿಲ್ಲ’ ಎಂದು ಧನಕರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ವಿಶೇಷ ಅಧಿಕಾರ ಒದಗಿಸುವ ಸಂವಿಧಾನದ 142ನೆಯ ವಿಧಿಯನ್ನು ಧನಕರ್ ಅವರು, ‘ನ್ಯಾಯಾಂಗಕ್ಕೆ ಪ್ರಜಾತಾಂತ್ರಿಕ ಶಕ್ತಿಗಳ ವಿರುದ್ಧ ಪ್ರಯೋಗಿಸಲು ಸದಾ ಸಿಗುವ ಅಣ್ವಸ್ತ್ರ ಕ್ಷಿಪಣಿ’ ಎಂದು ವ್ಯಾಖ್ಯಾನಿಸಿದ್ದಾರೆ.

ತನ್ನೆದುರು ಬಂದ ಯಾವುದೇ ಪ್ರಕರಣದಲ್ಲಿ ‘ಪರಿಪೂರ್ಣ ನ್ಯಾಯವನ್ನು ನೀಡಲು’ ಆದೇಶ ಹೊರಡಿಸುವ ಅಧಿಕಾರವನ್ನು ಈ ವಿಧಿಯು ಸುಪ್ರೀಂ ಕೋರ್ಟ್‌ಗೆ ನೀಡುತ್ತದೆ.

‘ಈಚಿನ ತೀರ್ಪೊಂದರಲ್ಲಿ ರಾಷ್ಟ್ರಪತಿಯವರಿಗೆ ಒಂದು ನಿರ್ದೇಶನ ಇದೆ. ನಾವು ಎತ್ತ ಸಾಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ? ನಾವು ಬಹಳ ಸೂಕ್ಷ್ಮವಾಗಿ ಇರಬೇಕು. ಪುನರ್‌ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕೋ ಬೇಡವೋ ಎಂಬ ಪ್ರಶ್ನೆ ಇದಲ್ಲ. ಈ ಬಗೆಯ ಪ್ರಜಾತಂತ್ರವನ್ನು ನಾವು ಯಾವತ್ತೂ ಬಯಸಿರಲಿಲ್ಲ...’ ಎಂದು ಧನಕರ್ ಹೇಳಿದ್ದಾರೆ.

‘ರಾಷ್ಟ್ರಪತಿಯವರ ಸ್ಥಾನವು ಬಹಳ ಉನ್ನತವಾದುದು. ರಾಷ್ಟ್ರಪತಿಯವರು ಸಂವಿಧಾನವನ್ನು ರಕ್ಷಿಸಲು ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಸಚಿವರು, ಉಪ ರಾಷ್ಟ್ರಪತಿ, ಸಂಸದರು ಮತ್ತು ನ್ಯಾಯಮೂರ್ತಿಗಳು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿರುತ್ತಾರೆ’ ಎಂದಿದ್ದಾರೆ.

ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಅಧಿಕಾರ ವ್ಯಾಪ್ತಿಯನ್ನು ಪ್ರತ್ಯೇಕಿಸುವ ತತ್ವದ ಬಗ್ಗೆಯೂ ಉಲ್ಲೇಖಿಸಿರುವ ಧನಕರ್, ‘ಸಂಸತ್ತಿನಲ್ಲಿ ನೀವು ಪ್ರಶ್ನಿಸಬಹುದು... ಆದರೆ ನ್ಯಾಯಾಂಗವು ಕಾರ್ಯಾಂಗದ ಆಡಳಿತ ನಡೆಸಿದರೆ ನೀವು ಪ್ರಶ್ನೆ ಹೇಗೆ ಕೇಳುತ್ತೀರಿ? ಚುನಾವಣೆಗಳಲ್ಲಿ ಯಾರನ್ನು ಹೊಣೆ ಮಾಡುವಿರಿ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.