ADVERTISEMENT

ಲಸಿಕಾ ಅಭಿಯಾನವನ್ನು ಅನುಮಾನಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 15:44 IST
Last Updated 26 ನವೆಂಬರ್ 2021, 15:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಜಾರಿಯಲ್ಲಿರುವ ಲಸಿಕಾ ಅಭಿಯಾನವನ್ನು ಅನುಮಾನಿಸಿ ತಪ್ಪು ಸಂದೇಶ ರವಾನಿಸಲು ಸಾಧ್ಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಕೂಡಾ ಲಸಿಕೆ ಪರವಾಗಿ ಮಾತನಾಡಿದೆ. ಬೇರೆ ದೇಶಗಳೂ ಕೂಡಾ ಲಸಿಕೆ ನೀಡುತ್ತಿವೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಲಸಿಕೆ ಪಡೆದ ಆರೋಗ್ಯವಂತ ಜನರು ಮೃತಪಡುತ್ತಿರುವ ಕುರಿತು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರಿದ್ದ ಪೀಠ ಹೇಳಿದೆ.

ಲಸಿಕೆಯ ಗಂಭೀರ ಮತ್ತು ಅಲ್ಪ ಪ್ರಮಾಣದ ಪ್ರತಿಕೂಲ ಪರಿಣಾಮ ಕುರಿತು ನಿಗಾವಹಿಸುವಂತೆ ಪರಿಷ್ಕೃತ ‘ರೋಗ ನಿರೋಧಕದ ಪ್ರತಿಕೂಲ ಪರಿಣಾಮ’(ಎಇಎಫ್ಐ) ಮಾರ್ಗಸೂಚಿಯಲ್ಲಿ ಹೇಳಲಾಗಿದೆ ಎಂದು ಪೀಠ ಹೇಳಿದೆ.

ADVERTISEMENT

ಲಸಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ನೂರಾರು ಸಾವುಗಳು ವರದಿಯಾಗಿವೆ ಎಂದು ಅಜಯ್‌ ಕುಮಾರ್‌ ಗುಪ್ತ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ಲಸಿಕೆ ಪಡೆದ 30 ದಿನಗಳ ಒಳಗೆ ಸಂಭವಿಸುತ್ತಿರುವ ಸಾವುಗಳ ಕುರಿತು ಮಾಹಿತಿ ಕಲೆಹಾಕುವಂತೆ ಮತ್ತು ಈ ಕುರಿತು ಮಾಹಿತಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.

ಲಸಿಕೆಗೆ ಸಂಬಂಧಿಸಿದಂತೆದೇಶದಾದ್ಯಂತ ನೂರಾರು ಜನರು ಮೃತಪಟ್ಟಿರುವ ಕುರಿತ ವರದಿಯನ್ನು ಅರ್ಜಿದಾರರ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹಿರಿಯ ವಕೀಲ ಕೋಲಿನ್‌ ಗ್ಯಾನ್ಸಾಲ್ವೆಸ್‌ ಕೋರ್ಟ್‌ಗೆ ಸಲ್ಲಿಸಿದರು.

ಅರ್ಜಿ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಕೋರ್ಟ್‌ ಎರಡು ವಾರಗಳ ನಂತರ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.