ADVERTISEMENT

ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮಮತಾಗೆ ಬಿಜೆಪಿಯ ಸೋನಾಲಿ ಗುಹಾ ಪತ್ರ

ಪಿಟಿಐ
Published 23 ಮೇ 2021, 16:30 IST
Last Updated 23 ಮೇ 2021, 16:30 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ್ದ ಟಿಎಂಸಿಯ ನಾಯಕರು ಮರಳಿ ಪಕ್ಷಕ್ಕೆ ಬರಲು ಬಯಸಿದ್ದಾರೆ.

ಮಮತಾ ಅವರ ಆಪ್ತೆಯಾಗಿದ್ದ ಸೋನಾಲಿ ಗುಹಾ ಅವರು ಟಿಎಂಸಿಗೆ ಮರಳಲು ಇಚ್ಛೆ ವ್ಯಕ್ತಪಡಿಸಿದ ಬೆನ್ನಲ್ಲೇ ಸರಳಾ ಮುರ್ಮು ಸಹ ಪಕ್ಷಕ್ಕೆ ಮರಳಲು ಬಯಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡುವ ಬಗ್ಗೆ ಅಸಮಾಧಾನ ಉಂಟಾಗಿದ್ದರಿಂದ ಮುರ್ಮು ಅವರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಸೇರ್ಪಡೆಯಾಗಿದ್ದು ತಮ್ಮ ಕಡೆಯಿಂದ ದೊಡ್ಡ ತಪ್ಪಾಗಿದೆ ಎಂದು ಹೇಳಿಕೊಂಡಿರುವ ಮುರ್ಮು, ತಮ್ಮನ್ನು ಕ್ಷಮಿಸಬೇಕು ಎಂದು ಬ್ಯಾನರ್ಜಿ ಅವರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

‘ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನನ್ನನ್ನು ಕ್ಷಮಿಸಬೇಕು. ಅವರು ಒಪ‍್ಪಿಕೊಂಡರೆ ನಾನು ಅವರೊಟ್ಟಿಗೆ ಇರುತ್ತೇನೆ ಮತ್ತು ಪಕ್ಷಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ’ ಎಂದು ಮುರ್ಮು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಮುರ್ಮು ಅವರು ಮಮತಾ ಬ್ಯಾನರ್ಜಿ ಅವರಿಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಒಂದು ಮೀನು ನೀರಿನಿಂದ ಹೊರಗುಳಿಯಲು ಸಾಧ್ಯವಿಲ್ಲ. ಹೀಗೆ ನಾನು ನೀವಿಲ್ಲದೆ ಬದುಕಲು ಸಾಧ್ಯವಿಲ್ಲ ದಿದಿ. ನಾನು ಕ್ಷಮೆ ಕೋರುತ್ತೇನೆ ಮತ್ತು ನೀವು ನನ್ನನ್ನು ಕ್ಷಮಿಸದಿದ್ದರೆ, ನನಗೆ ಬದುಕಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನಗೆ ಹಿಂತಿರುಗಿ ಬರಲು ಅವಕಾಶ ಮಾಡಿಕೊಡಿ. ನನ್ನ ಉಳಿದ ಜೀವನವನ್ನು ನಿಮ್ಮೊಂದಿಗೆ ಕಳೆಯಲು ಅವಕಾಶ ನೀಡಿ’ ಎಂದು ಪತ್ರದಲ್ಲಿ ಕೋರಿದ್ದಾರೆ.

ಮಾಜಿ ಶಾಸಕಿ ಸೋನಾಲಿ ಗುಹಾ ಅವರು ಸಹ ಶನಿವಾರ ಬ್ಯಾನರ್ಜಿಗೆ ಪತ್ರ ಬರೆದಿದ್ದು, ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.