ADVERTISEMENT

ನಗದು ಪತ್ತೆ: ನ್ಯಾ. ವರ್ಮಾ ವರ್ಗಾವಣೆ ವಿರೋಧಿಸಿ ಅಲಹಾಬಾದ್ HC ವಕೀಲರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 6:28 IST
Last Updated 25 ಮಾರ್ಚ್ 2025, 6:28 IST
<div class="paragraphs"><p>ನ್ಯಾಯಮೂರ್ತಿ ಯಶವಂತ್ ವರ್ಮಾ </p></div>

ನ್ಯಾಯಮೂರ್ತಿ ಯಶವಂತ್ ವರ್ಮಾ

   

–ಪಿಟಿಐ ಚಿತ್ರ

ಪ್ರಯಾಗರಾಜ್: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಇಲ್ಲಿನ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಅಲಹಾಬಾದ್ ಹೈಕೋರ್ಟ್‌ನ ಬಾರ್ ಅಸೋಸಿಯೇಷನ್ ​​ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.

ADVERTISEMENT

ಹೈಕೋರ್ಟ್‌ನ ಗೇಟ್ ಸಂಖ್ಯೆ 3ರಲ್ಲಿ ಜಮಾಯಿಸಿದ್ದ ಪ್ರತಿಭಟನಾ ನಿರತ ವಕೀಲರ ನೇತೃತ್ವ ವಹಿಸಿದ್ದ ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ಅನಿಲ್ ತಿವಾರಿ, ‘ಈ ಪ್ರತಿಭಟನೆ ಯಾವುದೇ ನ್ಯಾಯಾಲಯ ಅಥವಾ ನ್ಯಾಯಮೂರ್ತಿಗಳ ವಿರುದ್ಧವಲ್ಲ, ನ್ಯಾಯಾಂಗ ವ್ಯವಸ್ಥೆಗೆ ದ್ರೋಹ ಬಗೆದವರ ವಿರುದ್ಧ’ ಎಂದು ಹೇಳಿದ್ದಾರೆ.

‘ನಮ್ಮ ಹೋರಾಟ ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಮತ್ತು ಪಾರದರ್ಶಕತೆ ಇಲ್ಲದ ವ್ಯವಸ್ಥೆಯ ವಿರುದ್ಧ. ವರ್ಮಾ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕೆಂಬುದಾಗಿದೆ’ ಎಂದಿದ್ದಾರೆ.

ನ್ಯಾಯಮೂರ್ತಿ ವರ್ಮಾ ಅವರ ವರ್ಗಾವಣೆಗೆ ವಕೀಲರ ಸಂಘ ಸೋಮವಾರ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು. ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿತ್ತು.

ಈ ವಿಷಯದ ಕುರಿತು ಸಂಘವು ಸಮಗ್ರ ಹೋರಾಟಕ್ಕೆ ಸಿದ್ಧವಾಗಿದೆ ಎಂದು ತಿವಾರಿ ತಿಳಿಸಿದ್ದಾರೆ.

‘ಆರಂಭದಿಂದಲೂ, ಈ ವಿಷಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇಂದು, ಭಾರತದಾದ್ಯಂತ ವಕೀಲರು ಈ ಹೋರಾಟದಲ್ಲಿ ತೊಡಗಿದ್ದಾರೆ. ಸ್ಪಷ್ಟ ನಿರ್ಣಯ ಬರುವವರೆಗೆ, ಪರಿಣಾಮಗಳು ಏನೇ ಇರಲಿ, ನಾವು ಕೆಲಸವನ್ನು ಪುನರಾರಂಭಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಿಂದ ಭಾರಿ ಪ್ರಮಾಣದ ಹಣ ಪತ್ತೆಯಾಗಿದ್ದು, ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸು ಮಾಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ ದೃಢಪಡಿಸಿತ್ತು.

ಕೇಂದ್ರಕ್ಕೆ ಮಾಡಲಾಗಿರುವ ವರ್ಗಾವಣೆ ಶಿಫಾರಸನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿದೆ.

ಮಾರ್ಚ್ 14ರಂದು ರಾತ್ರಿ 11.35ರ ಸುಮಾರಿಗೆ ವರ್ಮಾ ಅವರ ದೆಹಲಿಯ ಲುಟಿಯೆನ್ಸ್ ಪ್ರದೇಶದ ನಿವಾಸದಲ್ಲಿ ಸಂಭವಿಸಿದ ಬೆಂಕಿಯ ಅವಘಡದ ಸಂದರ್ಭ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.