ಯಶವಂತ್ ವರ್ಮಾ
ನವದೆಹಲಿ: ರಾಜಧಾನಿಯಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
‘ಆದೇಶದ ರಿಟ್ ಅನ್ನು ಕೋರುವ ಮೊದಲು, ಅರ್ಜಿದಾರರು ಸಂಬಂಧಿಸಿದವರ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಕೋರಬೇಕು. ಅದು ಇಲ್ಲಿ ಪಾಲನೆಯಾಗಿಲ್ಲದ ಕಾರಣಕ್ಕೆ ನಾವು ಈ ರಿಟ್ ಅರ್ಜಿ ಸ್ವೀಕರಿಸುತ್ತಿಲ್ಲ. ಈ ಹಂತದಲ್ಲಿ ಇತರ ಮನವಿಗಳನ್ನು ಪರಿಶೀಲಿಸುವ ಅಗತ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠವು ಹೇಳಿದೆ.
ಆಂತರಿಕ ವಿಚಾರಣೆಯು ಬಾಕಿ ಇರುವ ಸ್ವರೂಪವನ್ನು ನ್ಯಾಯಪೀಠ ಉಲ್ಲೇಖಿಸಿತು. ಅರ್ಜಿದಾರರ ಮನವಿ ಅಕಾಲಿಕವೆಂದು ತಳ್ಳಿಹಾಕಿತು. ಮೇ 8ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ಮುಖ್ಯ ನ್ಯಾಯಮೂರ್ತಿಗಳು ಆಂತರಿಕ ತನಿಖಾ ಸಮಿತಿಯ ವರದಿಯನ್ನು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಕಳುಹಿಸಿರುವುದನ್ನು ತಿಳಿಸಲಾಗಿದೆ ಎಂದು ಹೇಳಿತು.
ಆಂತರಿಕ ತನಿಖಾ ಸಮಿತಿಯು ವರ್ಮಾ ವಿರುದ್ಧ ದೋಷಾರೋಪಣೆ ಮಾಡಿದ ನಂತರ, ಈ ಹಿಂದಿನ ಸಿಜೆಐ ಸಂಜೀವ್ ಖನ್ನಾ ಅವರು ವರ್ಮಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಯಾದ ವರ್ಮಾ ರಾಜೀನಾಮೆ ನೀಡಲು ನಿರಾಕರಿಸಿದ ನಂತರ ನ್ಯಾ. ಖನ್ನಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.