ADVERTISEMENT

ಜಾತಿ ಗಣತಿ: ಸರ್ವಪಕ್ಷ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:02 IST
Last Updated 6 ಮೇ 2025, 14:02 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: ವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಜಾತಿ ಗಣತಿಯು ಕೇವಲ ಜಾತಿ ಎಣಿಸುವುದಕ್ಕೆ ಸೀಮಿತವಾಗಬಾರದು. ದೊಡ್ಡ ಸಾಮಾಜಿಕ– ಆರ್ಥಿಕ ಉದ್ದೇಶಗಳನ್ನು ಈಡೇರಿಸಲು ಸಹಾಯವಾಗಬೇಕು’ ಎಂದು ಆಗ್ರಹಿಸಿದ್ದಾರೆ. 

‘ಜಾತಿ ಗಣತಿಯ ವರದಿಯಲ್ಲಿ ಯಾವುದೇ ವಿಷಯವನ್ನು ಮರೆಮಾಚಬಾರದು. ಪ್ರತಿ ಜಾತಿಯ ಸಂಪೂರ್ಣ ಸಾಮಾಜಿಕ– ಆರ್ಥಿಕ ದತ್ತಾಶವನ್ನು ಲಭ್ಯವಾಗುವಂತೆ ಮಾಡಿ ಅವರಿಗೆ ಸಾಂವಿಧಾನಿಕವಾಗಿ ನೀಡಲಾದ ಹಕ್ಕುಗಳನ್ನು ಒದಗಿಸಲು ಹಾಗೂ ಒಂದು ಜನಗಣತಿಯಿಂದ ಮತ್ತೊಂದು ಜನಗಣತಿಗೆ ಅವರ ಸಾಮಾಜಿಕ– ಆರ್ಥಿಕ ಪ್ರಗತಿಯನ್ನು ಅಳೆಯಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವಂತಾಗಬೇಕು. ಜಾತಿ ಗಣತಿಯ ಕುರಿತು ಶೀಘ್ರದಲ್ಲಿ ಸರ್ವಪಕ್ಷಗಳ ಸಭೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ADVERTISEMENT

‍‍ಪ್ರಧಾನಿ ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ, ‘ಸರ್ಕಾರವು ಯಾವುದೇ ವಿವರಗಳನ್ನು ಒದಗಿಸದೆ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದೆ’ ಎಂದು ಆಕ್ಷೇಪಿಸಿದ್ದಾರೆ. ‘ಜಾತಿಗಣತಿಯ ಪ್ರಶ್ನಾವಳಿಗಳನ್ನು ವಿನ್ಯಾಸಗೊಳಿಸಲು ತೆಲಂಗಾಣ ಮಾದರಿ ಅಳವಡಿಸಿಕೊಳ್ಳಬೇಕು. ಶೇ 50ರ ಮೀಸಲಾತಿ ಮಿತಿಯನ್ನು ತೆಗೆದು ಹಾಕಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.