ADVERTISEMENT

ಜಾತಿ ಜನ ಗಣತಿಯಿಂದ ಸಾಮಾಜಿಕ ನ್ಯಾಯಕ್ಕೆ ಬಲ: SCಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ

ಪಿಟಿಐ
Published 25 ಮೇ 2025, 16:12 IST
Last Updated 25 ಮೇ 2025, 16:12 IST
<div class="paragraphs"><p>ಜಾತಿ ಜನ ಗಣತಿ</p></div>

ಜಾತಿ ಜನ ಗಣತಿ

   

ನವದೆಹಲಿ: ಜಾತಿ ಜನಗಣತಿಯು ಸಮಾಜದಲ್ಲಿ ಬಿರುಕು ಹೆಚ್ಚಿಸಲಿದೆ ಎನ್ನುವ ದೂಷಣೆಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ಪ್ರತಿಕ್ರಿಯಿಸಿರುವ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ(ಎನ್‌ಸಿಎಸ್‌ಸಿ) ಅಧ್ಯಕ್ಷ ಕಿಶೋರ್ ಮಕವಾನ ಅವರು, ‘ಜಾತಿ ಗಣತಿಯು ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ’ ಎಂದಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ‘ಗಣತಿ ವೇಳೆ ಸಂಗ್ರಹಿಸುವ ದತ್ತಾಂಶವು ನೀತಿ ನಿರೂಪಣೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಅಡಿಪಾಯವಾಗಲಿದೆ. ಅವಕಾಶ ವಂಚಿತ ಹಿಂದುಳಿದ ಜಾತಿ ಸಮುದಾಯಗಳನ್ನು ಮೇಲೆತ್ತಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ADVERTISEMENT

ಮುಂದಿನ ಜನಗಣತಿ ವೇಳೆ ಜಾತಿ ಸಮೀಕ್ಷೆ ನಡೆಸುವ ಎನ್‌ಡಿಎ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮಕವಾನ, ‘ನಿಖರ ಅಂಕಿ–ಅಂಶಗಳು ಸಿಕ್ಕಲ್ಲಿ ವಂಚಿತ ಸಮುದಾಯಕ್ಕೆ ಸರ್ಕಾರದ ಮುದ್ರಾ ಯೋಜನೆ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳ ಪ್ರಮಾಣಬದ್ಧ ಪಾಲು ಸಿಗಲಿದೆ’ ಎಂದರು. 

1930ರ ನಂತರ ಮೊದಲ ಪ್ರಯತ್ನವಾಗಿ 2011ರಲ್ಲಿ ಯುಪಿಎ ಸರ್ಕಾರ ಸಾಮಾಜಿಕ–ಆರ್ಥಿಕ ಮತ್ತು ಜಾತಿ ಗಣತಿ ಮಾಡಿತ್ತು. ಆದರೆ ಜಾತಿ ದತ್ತಾಂಶ ಪೂರ್ಣವಾಗಿ ಬಿಡುಗಡೆ ಅಥವಾ ಬಳಕೆಯಾಗಲಿಲ್ಲ.

‘ಜಾತಿ ಜನಗಣತಿಯು ಒಳಪಂಗಡಗಳಲ್ಲಿ ಬಿರುಕು ಮೂಡಿಸುತ್ತದೆ ಎನ್ನುವುದು ಸರಿಯಲ್ಲ, ಬದಲಿಗೆ ಅಂಬೇಡ್ಕರ್‌ ಅವರು ಕನಸು ಕಂಡಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳನ್ನು ಮೇಲೆತ್ತಿ ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ’ ಎಂದರು.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ನೇರವಾಗಿ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಭಾಗಿ ಆಗದಿದ್ದರೂ ಆನಂತರ ಸಂಖ್ಯೆಗೆ ಅನುಗುಣವಾಗಿ ಪಾಲು ನೀಡುವ ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲೆತ್ತಬೇಕು’ ಎನ್ನುವ ಪ್ರಧಾನಿ ಮೋದಿ ಅವರ ಆಶಯಕ್ಕೆ ಜಾತಿಗಣತಿ ಪೂರಕವಾಗಿದೆ ಎಂದು ಮಕವಾನ ಹೇಳಿದರು.

1931ರ ನಂತರ ಅಂಕಿಅಂಶ ಪರಿಷ್ಕರಿಸಿಲ್ಲ. ಪರಿಶಿಷ್ಟ ಜಾತಿಯವರು ಜನಸಂಖ್ಯೆಯ ಶೇಕಡ 7ರಷ್ಟಿದ್ದಾರೆ ಎಂಬ ಅಂದಾಜು ಮಾಡಲಾಗುತ್ತಿದೆ. ಹಲವು ವಂಚಿತ ವರ್ಗಗಳು ಲೆಕ್ಕಕ್ಕೆ ಸಿಕ್ಕಿಲ್ಲ ಎಂದರು.

ಹೊಸ ಗಣತಿ ಕೇವಲ ಪರಿಶಿಷ್ಟ ಜಾತಿಗೆ ಸೀಮಿತವಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದ ಉಪ ಜಾತಿಗಳ ಸಮಗ್ರ ಅಂಕಿ–ಅಂಶ ಸಂಗ್ರಹಿಸಲಿದೆ ಎಂದರು.

ಜಾತಿ ಗಣತಿಗೆ ರಾಜಕೀಯ ಪಕ್ಷಗಳ ವಿರೋಧವನ್ನು ಖಂಡಿಸಿದ ಅವರು, 1951ರವರೆಗೆ ನಡೆದ ಗಣತಿಗಳಲ್ಲಿ ಜಾತಿ ಗಣತಿ ಸೇರಿಸದೇ ಇರುವುದು ಅವರ ಉದ್ದೇಶ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.