ADVERTISEMENT

ಕಾವೇರಿಗೆ ಮತ್ತೆ ಮತ್ತೆ ಪ್ರವಾಹ ಭೀತಿ

ಐಐಟಿ ಗಾಂಧಿನಗರ ವಿಜ್ಞಾನಿಗಳ ಅಧ್ಯಯನದಿಂದ ಬೆಳಕಿಗೆ

ಕಲ್ಯಾಣ್‌ ರೇ
Published 11 ಆಗಸ್ಟ್ 2019, 20:00 IST
Last Updated 11 ಆಗಸ್ಟ್ 2019, 20:00 IST
ಭಾಗಮಂಡಲದ ತ್ರಿವೇಣಿ ಸಂಗಮದ ಆಸು ಪಾಸು – ಸಂಗ್ರಹ ಚಿತ್ರ
ಭಾಗಮಂಡಲದ ತ್ರಿವೇಣಿ ಸಂಗಮದ ಆಸು ಪಾಸು – ಸಂಗ್ರಹ ಚಿತ್ರ   

ನವದೆಹಲಿ: ಹವಾಮಾನ ಬದಲಾವಣೆಯು ಭಾರತದಲ್ಲಿ ಪ್ರವಾಹದ ಅಪಾಯವನ್ನು ಹೆಚ್ಚಿಸಿದೆ. ದಕ್ಷಿಣ ಭಾರತದಲ್ಲಿ ಪ್ರವಾಹದ ಅಪಾಯ ಅತಿ ಹೆಚ್ಚು ಇರುವುದು ಕಾವೇರಿ ಕಣಿವೆಯಲ್ಲಿ ಎಂಬ ಆತಂಕಕಾರಿ ಅಂಶವನ್ನುಗಾಂಧಿನಗರ ಐಐಟಿ ತಜ್ಞರು ನಡೆಸಿದ ಸಂಶೋಧನೆ ಹೇಳಿದೆ.

ದಕ್ಷಿಣದಲ್ಲಿ ಗೋದಾವರಿ, ಕೃಷ್ಣಾ ಮತ್ತು ಕಾವೇರಿ ಮೂರು ಮುಖ್ಯ ನದಿ ಕಣಿವೆಗಳು. ಗೋದಾವರಿ ಮತ್ತು ಕೃಷ್ಣಾಕ್ಕೆ ಹೋಲಿಸಿದರೆ ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ತುತ್ತಾಗುವ ಅಪಾಯ ಕಾವೇರಿ ಕಣಿವೆಯಲ್ಲಿ ಹೆಚ್ಚು ಎಂದು ಅಧ್ಯಯನ ಹೇಳಿದೆ.

3–5 ದಿನ ಭಾರಿ ಪ್ರಮಾಣದ ಮಳೆ ಸುರಿಯುವುದು ಪ್ರವಾಹಕ್ಕೆ ಕಾರಣವಾಗುತ್ತಿದೆ. 1966–2005ರ ಅವಧಿಗೆ ಹೋಲಿಸಿದರೆಮುಂದಿನ ದಶಕಗಳಲ್ಲಿ ಇಂತಹ ಮಳೆ ಶೇ 40ರಷ್ಟು ಏರಿಕೆಯಾಗಲಿದೆ.

ADVERTISEMENT

2020ರಿಂದ 2059ರ ಅವಧಿಯಲ್ಲಿ ಕಾವೇರಿಯಲ್ಲಿ ಇಂತಹ 18 ಪ್ರವಾಹ ಬರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.2060–2099ರ ಅವಧಿಯಲ್ಲಿ ದಕ್ಷಿಣದ ಎಲ್ಲ ಮೂರು ನದಿ ಪಾತ್ರಗಳೂ ಹೆಚ್ಚು ಹೆಚ್ಚು ಪ್ರವಾಹಕ್ಕೆ ಒಳಗಾಗಲಿವೆ. ಕಾವೇರಿಯಲ್ಲಿ 28 ಬಾರಿ ಮತ್ತು ಉಳಿದೆರಡು ನದಿಗಳಲ್ಲಿ 20 ಪ್ರವಾಹ ಉಂಟಾಗಬಹುದು.

ಅಧ್ಯಯನ ಸಾರ

*ಭಾರತೀಯ ಹವಾಮಾನ ಇಲಾಖೆಯ ದತ್ತಾಂಶಗಳ ಆಧಾರದಲ್ಲಿ ಸುಧಾರಿತ ಲೆಕ್ಕಾಚಾರ ಮಾದರಿಗಳ ಮೂಲಕ ಈ ಅಧ್ಯಯನ ನಡೆಸಲಾಗಿದೆ

*ಒಂದೇ ದಿನ ಭಾರಿ ಮಳೆ ಸುರಿದು ಆಗುವ ಅನಾಹುತಗಳ ಬಗ್ಗೆಯೂ ಗಮನ ಹರಿಸಲಾಗಿದೆ

*ಒಂದೇ ದಿನದ ಮಳೆಯಿಂದಾಗುವ ಪ್ರವಾಹಕ್ಕಿಂತ ಕೆಲವು ದಿನ ನಿರಂತರ
ಮಳೆಯಿಂದಾಗುವ ಪ್ರವಾಹ ಕೃಷಿ ಮತ್ತು ಮೂಲ ಸೌಕರ್ಯದ ಮೇಲೆ ಬೀರುವ ಪರಿಣಾಮ ಹೆಚ್ಚು

*ಕೆಲವೇ ದಿನಗಳಲ್ಲಿ ಅತಿಯಾಗಿ ಮಳೆಯಾಗುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ

*ದೇಶದಲ್ಲಿ ಪ್ರವಾಹದ ಅಪಾಯ ಅತಿ ಹೆಚ್ಚು ಇರುವ ನದಿ ಬ್ರಹ್ಮಪುತ್ರ

*ವೆದರ್‌ ಎಂಡ್‌ ಕ್ಲೈಮೆಟ್‌ ಎಕ್ಸ್‌ಟ್ರೀಮ್‌ ನಿಯತಕಾಲಿಕದಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ

ಪ್ರವಾಹಕ್ಕೆ ಕಾರಣ

ಹಸಿರು ಅನಿಲ ಹೊರಸೂಸುವಿಕೆಯಿಂದಾಗಿ ವಾತಾವರಣದ ಬಿಸಿ ಏರಿಕೆಯಾಗುತ್ತದೆ. ಅದರಿಂದಾಗಿ ಒಮ್ಮೆಲೆ ಭಾರಿ ಮಳೆ ಸುರಿದು ಅದು ಪ್ರವಾಹ ಸೃಷ್ಟಿಸುತ್ತದೆ. ಹಸಿರು ಅನಿಲ ಹೊರಸೂಸುವಿಕೆ ಹೆಚ್ಚಾದಷ್ಟು ಪ್ರವಾಹದ ಅಪಾಯವೂ ಹೆಚ್ಚು.

*ಹಸಿರುಮನೆ ಅನಿಲ ಹೊರಸೂಸುವಿಕೆ ಹೆಚ್ಚಾದಂತೆ ಪ್ರವಾಹವೂ ಹೆಚ್ಚಲಿದೆ. ಹವಾಮಾನ ಬದಲಾವಣೆ ತಡೆಗೆ ಜಾಗತಿಕ ಸಮುದಾಯ ಮುಂದಾಗಬೇಕು

- ವಿಮಲಾ ಮಿಶ್ರಾ, ವಿಜ್ಞಾನಿ, ಐಐಟಿ ಗಾಂಧಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.