ADVERTISEMENT

ಮಳೆ ಸುರಿದರಷ್ಟೇ ನೀರು

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಪುನರುಚ್ಚಾರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:00 IST
Last Updated 25 ಜೂನ್ 2019, 20:00 IST
ಕೆಆರ್‌ಎಸ್‌ ಜಲಾಶಯ
ಕೆಆರ್‌ಎಸ್‌ ಜಲಾಶಯ   

ನವದೆಹಲಿ: ವಾಡಿಕೆಯ ಮುಂಗಾರು ಮಳೆ ಸುರಿದು ಜಲಾಶಯಗಳ ಒಳಹರಿವು ಹೆಚ್ಚಿದರೆ ಮಾತ್ರ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ಸೂಚಿಸಿದೆ.

ಮಂಗಳವಾರ ನಡೆದ ಕಾವೇರಿ ಕಣಿವೆ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ ರಾಜ್ಯದ ಜಲಾಶಯಗಳ ಸ್ಥಿತಿಗತಿ ಕುರಿತು ಚರ್ಚಿಸಿದ ಬಳಿಕ ಪ್ರಾಧಿಕಾರವು ಪುನರುಚ್ಚರಿಸಿತು.

ಮೇ 28ರಂದು ನಡೆದ ಸಭೆಯಲ್ಲೂ ಮಳೆ ಸುರಿದರೆ ಮಾತ್ರ ನೀರು ಹರಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು.

ADVERTISEMENT

ಕಾವೇರಿ ಕಣಿವೆಯಲ್ಲಿ ಪ್ರಸಕ್ತ ವರ್ಷ ನಿರೀಕ್ಷಿತ ಮುಂಗಾರು ಸುರಿಯದ್ದರಿಂದ ಜಲಾಶಯಗಳ ಒಳಹರಿವು ಆರಂಭವಾಗಿಲ್ಲ. ಜೂನ್‌ 1ರಿಂದ 20ರವರೆಗೆ ಕರ್ನಾಟಕದ ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಗೆ 1.77 ಟಿಎಂಸಿ ಅಡಿ ನೀರು ಹರಿದುಬಂದಿದೆ. ಇದೇ ವೇಳೆ ಬಿಳಿಗುಂಡ್ಲು ಮಾಪನ ಕೇಂದ್ರದಿಂದ ತಮಿಳುನಾಡಿಗೆ 1.88 ಟಿಎಂಸಿ ಅಡಿ ನೀರು ಹರಿದುಹೋಗಿದೆ ಎಂದು ಕೇಂದ್ರ ಜಲ ಆಯೋಗದ ಅಧ್ಯಕ್ಷರೂ ಆಗಿರುವ ಪ್ರಾಧಿಕಾರದ ಮುಖ್ಯಸ್ಥ ಎಸ್‌.ಮಸೂದ್‌ ಹುಸೇನ್‌ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದ ಪಾಲಿನ ನೀರನ್ನು ಹರಿಸುವಂತೆ ತಮಿಳುನಾಡು ಪ್ರತಿನಿಧಿಗಳು ಸಭೆಯಲ್ಲಿ ಆಗ್ರಹಿಸಿದರು. ಉತ್ತಮ ಮಳೆ ಸುರಿಯುವವರೆಗೆ ನೀರು ಹರಿಸಲಾಗದು ಎಂದು ಕರ್ನಾಟಕದ ಪ್ರತಿನಿಧಿಗಳು ಸ್ಪಷ್ಟಪಡಿಸಿದರು. ಜಲಾಶಗಳ ಸ್ಥಿತಿಗತಿಯ ಮಾಹಿತಿ ಆಧರಿಸಿ, ಮಳೆ ಸುರಿದು ಒಳಹರಿವು ಆರಂಭವಾದಲ್ಲಿ ಮಾತ್ರ ನೀರು ಹರಿಸಬೇಕು ಎಂದು ಸೂಚಿಸಲಾಗಿದೆ. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲೂ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.

2018ರ ಫೆಬ್ರುವರಿ 16ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಕರ್ನಾಟಕವು ಜೂನ್‌ ತಿಂಗಳಲ್ಲಿ 9.91 ಟಿಎಂಸಿ ಅಡಿ ಹಾಗೂ ಜುಲೈನಲ್ಲಿ 31.24 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಆದರೆ, ಮಳೆಯ ಅಭಾವದಿಂದ ನೀರು ಹರಿಸುವುದು ಅಸಾಧ್ಯವಾಗಿದೆ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.