ADVERTISEMENT

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ

ಜೂನ್‌, ಜುಲೈನಲ್ಲಿ 40.42 ಟಿಎಂಸಿ ಅಡಿ ಪಾಲು...

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 15:37 IST
Last Updated 11 ಜೂನ್ 2020, 15:37 IST
   

ನವದೆಹಲಿ: ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಮುಂಗಾರು ಹಂಗಾಮಿನ ಆರಂಭಿಕ ತಿಂಗಳಿನ ತಮಿಳುನಾಡಿನ ಪಾಲನ್ನು ನೀಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

ಪ್ರಾಧಿಕಾರದ ಹಂಗಾಮಿ ಅಧ್ಯಕ್ಷ ಆರ್‌.ಕೆ. ಜೈನ್ ನೇತೃತ್ವದಲ್ಲಿ ವಿಡಿಯೋ ಕಾನ್ಫರನ್ಸ್‌ ಮೂಲಕ ನಡೆಸಲಾದ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳ ಸದಸ್ಯರ ಸಭೆಯಲ್ಲಿ ತಮಿಳುನಾಡಿಗೆ ಜೂನ್‌ ತಿಂಗಳಿನ ಪಾಲಾದ 9.19 ಟಿಎಂಸಿ ಅಡಿ, ಜುಲೈ ಪಾಲಿನ 31.23 ಟಿಎಂಸಿ ಅಡಿ ನೀರು ಹರಿಸುವಂತೆ ರಾಜ್ಯಕ್ಕೆ ಸೂಚಿಸಲಾಗಿದೆ.

ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆಯಲು ಚರ್ಚೆ ನಡೆಸಬೇಕೆಂಬ ನಿಟ್ಟಿನಲ್ಲಿ ಕರ್ನಾಟಕದ ಸಲಹೆಯ ಮೇರೆಗೆ ನಿಗದಿಪಡಿಸಿದ್ದ ಕಾರ್ಯಸೂಚಿಯನ್ನು ತಮಿಳುನಾಡು ಸದಸ್ಯರ ವಿರೋಧದಿಂದಾಗಿ ಕೈಬಿಡಲಾಯಿತು.

ADVERTISEMENT

ಪ್ರಾಧಿಕಾರದ ಕೇಂದ್ರೀಯ ಸದಸ್ಯ ನವೀನ್‌ಕುಮಾರ್‌, ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಐ ತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರಗಳು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ 2018ರ ಫೆಬ್ರುವರಿ 16ರಂದು ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.