ನವದೆಹಲಿ: ‘ವಿವಿಧ ರಾಜ್ಯಗಳಲ್ಲಿ ಸೈಬರ್ ಸಂಘಟಿತ ಅಪರಾಧ ಕೃತ್ಯದಲ್ಲಿ ತೊಡಗಿದ್ದ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಕೇಂದ್ರಿಯ ತನಿಖಾ ಸಂಸ್ಥೆಯು (ಸಿಬಿಐ) 26 ಸೈಬರ್ ಕ್ರಿಮಿನಲ್‌ಗಳನ್ನು ಬಂಧಿಸಿದೆ’ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
‘ಚಕ್ರ–3’ ಹೆಸರಿನಲ್ಲಿ ಸಿಬಿಐ ಕಾರ್ಯಾಚರಣೆ ನಡೆಸಿದ್ದು, ಪುಣೆ, ಹೈದರಾಬಾದ್, ಅಹಮದಾಬಾದ್, ವಿಶಾಖಪಟ್ಟಣಂನ 32 ಸ್ಥಳಗಳಲ್ಲಿ ಗುರುವಾರ ರಾತ್ರಿ ತಂಡವು ಶೋಧ ನಡೆಸಿತ್ತು. ಈ ವೇಳೆ ₹58.45 ಲಕ್ಷ ನಗದು, ಲಾಕರ್ ಕೀ ಹಾಗೂ ಮೂರು ದುಬಾರಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.
‘ಪುಣೆಯ ರೀಜೆಂಟ್ ಫ್ಲಾಜಾದಲ್ಲಿರುವ ‘ವಿ.ಸಿ.ಇನ್‌ಕಾನ್‌ಫಾರ್ಮಟಿಸ್’, ವಿಶಾಖಪಟ್ಟಣದ ಮುರಳೀನಗರದಲ್ಲಿರುವ ‘ವಿ.ಸಿ.ಇನ್ಫೋಮೆಟ್ರಿಕ್ಸ್’, ಹೈದರಾಬಾದ್‌ನ ‘ವಿಯಾಜೆಕ್ಸ್’, ವಿಶಾಖಪಟ್ಟಣಂನ ‘ಅತ್ರಿಯಾ ಗ್ಲೋಬಲ್ ಸೊಲ್ಯೂಷನ್ಸ್’ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ನಾಲ್ಕು ಕಾಲ್‌ಸೆಂಟರ್‌ಗಳಲ್ಲಿ ಆನ್‌ಲೈನ್ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದ 170 ಮಂದಿಯನ್ನು ಪತ್ತೆಹಚ್ಚಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಸೈಬರ್ ಕ್ರಿಮಿನಲ್ಸ್‌ಗಳು ಬಹು ಆಯಾಮದ ಕ್ರಿಮಿನಲ್ ಚಟುಚವಟಿಕೆಯಲ್ಲಿ ತೊಡಗಿದ್ದು, ಅಮೆರಿಕದಲ್ಲಿರುವ ಗ್ರಾಹಕರಿಗೆ ನೆರವಾಗುವುದಾಗಿ ನಂಬಿಸಿ ಅವರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡುತ್ತಿದ್ದರು. ಇದಾದ ಬಳಿಕ, ಅವರ ಬ್ಯಾಂಕ್ ಖಾತೆಯಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ವಹಿವಾಟು ನಡೆಸುತ್ತಿದ್ದರು’ ಎಂದು ಸಿಬಿಐನ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.