ನವದೆಹಲಿ: ವಾಯುನೆಲೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಸಂಬಂಧ ಪೂರೈಕೆ ಆದೇಶಪತ್ರ ನೀಡಲು ₹3.5 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ರಕ್ಷಣಾ ಪಡೆಗಳ ಲೆಕ್ಕಪತ್ರ ಮಹಾನಿಯಂತ್ರಕ ಅಶೋಕ್ ಕುಮಾರ್ ಜಾದವ್ ಎಂಬವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
₹2.5 ಕೋಟಿ ಮೊತ್ತದ ಗುತ್ತಿಗೆ ನೀಡಲು ₹4 ಲಕ್ಷ ಲಂಚಕ್ಕೆ ಅಶೋಕ್ ಕುಮಾರ್ ಜಾದವ್ ಹಾಗೂ ವಾಯುಪಡೆಯ ಸಾರ್ಜೆಂಟ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಸಿ.ಸಿ.ಟಿ.ವಿ ಕ್ಯಾಮೆರಾ ಕಂಪನಿ ಮಾಲೀಕರು ಸಿಬಿಐ ಅಧಿಕಾರಿಗಳಿಗೆ ದೂರು ನೀಡಿದ್ದರು.
ಆರೋಪಿಯನ್ನು ಅಹಮದಾಬಾದ್ ವಿಶೇಷ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಅ.4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಸಿಬಿಐ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
ಉದ್ಯಮಿಯು ನೀಡಿರುವ ಧ್ವನಿಮುದ್ರಿಕೆಯಲ್ಲಿ ಸಾರ್ಜೆಂಟ್ ಪಾತ್ರವಿರುವುದು ಸ್ಪಷ್ಟವಾಗಿದೆ. ಇದನ್ನು ಪರಿಶೀಲಿಸಲೆಂದು ಸಿಬಿಐ ಅಧಿಕಾರಿಗಳು ಸಾರ್ಜೆಂಟ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಆದರೆ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.