ADVERTISEMENT

ಯೆಸ್ ಬ್ಯಾಂಕ್ ಪ್ರಕರಣ: ಹಲವು ಸ್ಥಳಗಳಲ್ಲಿ ಸಿಬಿಐ ಶೋಧ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 14:52 IST
Last Updated 9 ಜೂನ್ 2021, 14:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಯೆಸ್ ಬ್ಯಾಂಕ್‌ನಲ್ಲಿ ನಡೆದಿರುವ ₹466 ಕೋಟಿ ಅಕ್ರಮ ವರ್ಗಾವಣೆ ಹಗರಣ ಸಂಬಂಧ ಓಯಿಸ್ಟರ್‌ ಬಿಲ್ಡ್‌ವೆಲ್‌ ಪ್ರೈವೇಟ್ ಲಿಮಿಟೆಡ್, ಅವಂತಾ ಗ್ರೂಪ್ ಪ್ರವರ್ತಕ ಗೌತಮ್ ಥಾಪರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ದೆಹಲಿ ಮತ್ತು ರಾಜಧಾನಿ ವಲಯದ ಅನೇಕ ಸ್ಥಳಗಳು ಸೇರಿದಂತೆ ಇತರ ಮೂರು ನಗರಗಳಲ್ಲಿ ಶೋಧ ನಡೆಸಿದೆ.

ಸಿಬಿಐ ಅಧಿಕಾರಿಗಳ ತಂಡ ಆರೋಪಿಗಳಿಗೆ ಸೇರಿದ ಜಾಗಗಳು ಸೇರಿದಂತೆ ದೆಹಲಿ, ರಾಜಧಾನಿ ವಲಯ, ಲಖನೌ (ಉತ್ತರ ಪ್ರದೇಶ), ಸಿಕಂದರಾಬಾದ್ (ತೆಲಂಗಾಣ) ಮತ್ತು ಕೋಲ್ಕತ್ತದ (ಪಶ್ಚಿಮ ಬಂಗಾಳ) 14 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕಿನ ಮಾಜಿ ಮುಖ್ಯಸ್ಥ ರಾಣಾ ಕಪೂರ್ ಅವರ ಜತೆ ಸೇರಿ ಯೆಸ್ ಬ್ಯಾಂಕಿನಲ್ಲಿ ಸಾರ್ವಜನಿಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಮತ್ತೊಂದು ಪ್ರಕರಣದಲ್ಲಿ ಗೌತಮ್‌ ಥಾಪರ್ ಅವರನ್ನು ಈಗಾಗಲೇ ತನಿಖೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಸ್ತುತ ಪ್ರಕರಣದಲ್ಲಿ ಸಿಬಿಐ, ಓಯಿಸ್ಟರ್‌ ಬಿಲ್ಡ್‌ವೆಲ್‌ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ರಘುಬೀರ್ ಕುಮಾರ್ ಶರ್ಮಾ, ರಾಜೇಂದ್ರ ಕುಮಾರ್ ಮಂಗಲ್, ತಾಪ್ಸಿ ಮಹಾಜನ್ ಮತ್ತು ಅವಂತಾ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ ಹಾಗೂ ಝಬುವಾ ಬುವಾ ಪವರ್ ಲಿಮಿಟೆಡ್‌ನ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಿದೆ.

ಬ್ಯಾಂಕಿನ ಮುಖ್ಯ ವಿಚಕ್ಷಣಾಧಿಕಾರಿ ಆಶಿಶ್ ವಿನೋದ್ ಜೋಶಿ ಅವರು ನೀಡಿದ ದೂರಿನ ಮೇರೆಗೆ ಇದೇ ವರ್ಷದ ಮೇ 27ರಂದು ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕ ಹಣ ₹466.15 ಕೋಟಿ ವರ್ಗಾಯಿಸಲು ಕ್ರಿಮಿನಲ್ ಪಿತೂರಿ, ನಂಬಿಕೆ ದ್ರೋಹ, ವಂಚನೆ ಮತ್ತು ಫೋರ್ಜರಿ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.