ADVERTISEMENT

ಸಿಬಿಐ ತನಿಖೆಗೆ ಆದೇಶಿಸುವುದು ಪ್ರವೃತ್ತಿ ಆಗಬಾರದು: ಸುಪ್ರೀಂ ಕೋರ್ಟ್

ಪಿಟಿಐ
Published 17 ಅಕ್ಟೋಬರ್ 2025, 13:52 IST
Last Updated 17 ಅಕ್ಟೋಬರ್ 2025, 13:52 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸಾಂವಿಧಾನಿಕ ನ್ಯಾಯಾಲಯಗಳು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸುವುದನ್ನು ತನ್ನ ಪ್ರವೃತ್ತಿಯಾಗಿಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉತ್ತರ ಪ್ರದೇಶ ವಿಧಾನ ಪರಿಷತ್‌ನ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶಿಸಿದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ವಿಜಯ್ ಬಿಷ್ಣೋಯಿ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸಿಬಿಐ ತನಿಖೆಗೆ ನಿರ್ದೇಶಿಸುವುದರ ಕುರಿತ ತನ್ನ ಅಧಿಕಾರವನ್ನು ಮಿತವಾಗಿ, ಎಚ್ಚರಿಕೆಯಿಂದ ಮತ್ತು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಚಲಾಯಿಸಬೇಕು ಎಂದು ಪೀಠ ಹೇಳಿದೆ.

ADVERTISEMENT

‘ಕಕ್ಷಿದಾರರು ರಾಜ್ಯ ಪೊಲೀಸರ ಮೇಲೆ ವಿಶ್ವಾಸದ ಕೊರತೆ ಹೊಂದಿದ್ದಾರೆ ಅಥವಾ ಅವರ ವಿರುದ್ಧ ಆಪಾದನೆ ಹೊರಿಸಿದ್ದಾರೆ ಎಂಬ ಕಾರಣಕ್ಕಾಗಿ ತನಿಖೆಯನ್ನು ಸಿಬಿಐಗೆ ವಹಿಸುವುದನ್ನು ಪ್ರವೃತ್ತಿಯಾಗಿಸಿಕೊಳ್ಳಬಾರದು ಎಂದು ಈ ನ್ಯಾಯಾಲಯವು ನಿರಂತರವಾಗಿ ಎಚ್ಚರಿಸಿದೆ’ ಎಂದಿತು.

‘ಸಾಂವಿಧಾನಿಕ ನ್ಯಾಯಾಲಯವು ಸಿಬಿಐ ತನಿಖೆ ನಡೆಸುವಂತೆ ನಿರ್ದೇಶನ ನೀಡುವುದನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಬೇಕು. ರಾಜ್ಯದ ಉನ್ನತ ಅಧಿಕಾರಿಗಳು ಅಥವಾ ರಾಜಕೀಯವಾಗಿ ಪ್ರಭಾವ ಹೊಂದಿರುವ ವ್ಯಕ್ತಿಗಳು ತನಿಖೆಯ ಮೇಲೆ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬುದು ಮನವರಿಕೆಯಾದಾಗ ಅಥವಾ ಸ್ಥಳೀಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುವ ಬಗ್ಗೆ ಅನುಮಾನ ಮೂಡಿದ ಸಂದರ್ಭಗಳಲ್ಲಿ ಮಾತ್ರ ಸಿಬಿಐಗೆ ವಹಿಸುವುದನ್ನು ಪರಿಗಣಿಸಬಹುದು’ ಎಂದು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.