ADVERTISEMENT

ಪೊಲೀಸ್‌ ರಕ್ಷಣೆ ಕೋರಿ ‘ಸುಪ್ರೀಂ’ ಮೊರೆ ಹೋದ ಹೈದರಾಬಾದ್‌ನ ಸಾನಾ ಸತೀಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 18:33 IST
Last Updated 29 ಅಕ್ಟೋಬರ್ 2018, 18:33 IST
ರಾಕೇಶ್‌ ಆಸ್ತಾನಾ
ರಾಕೇಶ್‌ ಆಸ್ತಾನಾ   

ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತು ಡಿಎಸ್‌ಪಿ ದೇವೆಂದರ್‌ ಕುಮಾರ್‌ ವಿರುದ್ಧದ ಲಂಚ ಆರೋಪ ಮಾಡಿದ ಹೈದರಾಬಾದ್‌ ಉದ್ಯಮಿ ಸಾನಾ ಸತೀಶ್‌ ಬಾಬು ಪೊಲೀಸರ ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಿಬಿಐ ವರಿಷ್ಠ ಅಧಿಕಾರಿಗಳ ವಿರುದ್ಧದ ಲಂಚ ಪ್ರಕರಣದಲ್ಲಿ ತಮಗೆ ಜೀವಭಯ ಇದೆ ಎಂದು ಅವರು ತಿಳಿಸಿದ್ದಾರೆ.

ಸಿಬಿಐ ತಮ್ಮ ವಿರುದ್ಧ ಹೊರಡಿಸಿರುವ ಸಮನ್ಸ್‌ಗೆ ತಡೆ ನೀಡುವಂತೆಯೂ ಅವರು ಇದೇ ವೇಳೆ ಕೋರಿದ್ದಾರೆ.

ADVERTISEMENT

ನ್ಯಾಯಮೂರ್ತಿ ಪಟ್ನಾಯಕ್‌ ಸಮ್ಮುಖದಲ್ಲಿ ಮಾತ್ರ ಸಿಬಿಐ ಅಧಿಕಾರಿಗಳು ತಮ್ಮನ್ನು ಪ್ರಶ್ನಿಸಬೇಕು. ಈ ಸಂಬಂಧ ಆದೇಶ ಹೊರಡಿಸುವಂತೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಜಾಮೀನು ಕೋರಿ ಸಿಬಿಐ ಡಿಎಸ್‌ಪಿ ಅರ್ಜಿ: ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಸಿಬಿಐ ಡಿಎಸ್‌ಪಿ ದೇವೇಂದರ್‌ ಕುಮಾರ್‌ ಜಾಮೀನು ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ಕುಮಾರ್‌ ಏಳು ದಿನಗಳ ಬಂಧನ ಅವಧಿ ಮಂಗಳವಾರ ಕೊನೆಗೊಳ್ಳಲಿದ್ದು, ಸಿಬಿಐ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅದೇ ವೇಳೆ ಜಾಮೀನು ಅರ್ಜಿಯ ವಿಚಾರಣೆಗೆ ಬರಲಿದೆ.

ಅಸ್ತಾನಾ ನಾಲ್ಕು ದಿನ ನಿರಾಳ

ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧ ನವೆಂಬರ್‌ 1ರವರೆಗೆ ಯಾವುದೇ ಶಿಸ್ತುಕ್ರಮ ಜರುಗಿಸದಂತೆ ದೆಹಲಿ ಹೈಕೋರ್ಟ್‌ ಸೋಮವಾರ ಸಿಬಿಐಗೆ ಸೂಚಿಸಿದೆ.

ಅಸ್ತಾನ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಗುರುವಾರದವರೆಗೂ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಮೂರ್ತಿ ನಜ್ಮಿ ವಜೀರಿ ಆದೇಶಿಸಿದ್ದಾರೆ. ಇದರೊಂದಿಗೆ ಅಸ್ತಾನಾ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.

ಲಂಚ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಗೊಳಿಸುವಂತೆ ಅಸ್ತಾನಾ ಮತ್ತು ಸಿಬಿಐ ಡಿಎಸ್‌ಪಿ ದೇವೇಂದರ್‌ ಕುಮಾರ್‌ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ದೆಹಲಿ ಹೈಕೋರ್ಟ್, ಸಿಬಿಐನ ಅಭಿಪ್ರಾಯ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.