ADVERTISEMENT

ಯೋಗೇಶ್‌ಗೌಡ ಗೌಡರ ಕೊಲೆ ಪ್ರಕರಣ: ವಿನಯ ಕುಲಕರ್ಣಿ ಜಾಮೀನು ಅರ್ಜಿಗೆ ಸಿಬಿಐ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 19:41 IST
Last Updated 25 ಜುಲೈ 2021, 19:41 IST
ಮಾಜಿ ಸಚಿವ ವಿನಯ ಕುಲಕರ್ಣಿ
ಮಾಜಿ ಸಚಿವ ವಿನಯ ಕುಲಕರ್ಣಿ   

ನವದೆಹಲಿ: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ,ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಸಿಬಿಐ ಆಕ್ಷೇಪ ಸಲ್ಲಿಸಿದೆ.

‘ಆರೋಪಿಯು ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳನ್ನು ಬೆದರಿಸುವ, ಸಾಕ್ಷ್ಯಗಳನ್ನು ನಾಶಪಡಿಸುವ ಹಾಗೂ ವಿಚಾರಣೆಯನ್ನು ದಿಕ್ಕುತಪ್ಪಿಸುವ ಸಾಧ್ಯತೆ ಇದೆ. ಅಂಥ ವ್ಯಕ್ತಿಗೆ ಜಾಮೀನು ನೀಡಲು ಯಾವುದೇ ಕಾರಣವಿಲ್ಲ. ಹೈಕೋರ್ಟ್‌ ಕೂಡ ಅವರ ಜಾಮೀನು ಅರ್ಜಿಯನ್ನುಈಗಾಗಲೇ ತಳ್ಳಿಹಾಕಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ.

‘ಕೊಲೆಯಾದ ವ್ಯಕ್ತಿಯ ಪತ್ನಿಗೆ ಲಕ್ಷಾಂತರ ರೂಪಾಯಿ ನೀಡುವುದರ ಜೊತೆಗೆ ಕಾಂಗ್ರೆಸ್‌ನ ಸ್ಥಳೀಯ ಘಟಕದಲ್ಲಿ ಹುದ್ದೆ ಅಥವಾ ಕೆಲಸ ಕೊಡಿಸಲು ನೆರವಾಗುವ ಮೂಲಕ ಅವರನ್ನು ಪ್ರಕರಣದ ವಿರುದ್ಧ ನಿಲ್ಲುವಂತೆ ಮಾಡಲಾಯಿತು. ಆರೋಪಿಯ ಬೆಂಬಲಿಗರೊಬ್ಬರಿಂದ ಮೃತನ ಸೋದರನ ಮೇಲೆ ಪ್ರಭಾವ ಬೀರುವ ಯತ್ನ ನಡೆದಿತ್ತು’ ಎಂದು ಆರೋಪಿಸಿರುವ ಸಿಬಿಐ, ಇದು ಆರೋಪಿಯ ಪಾತ್ರ ಹಾಗೂ ಪ್ರಭಾವವನ್ನು ದೃಢಪಡಿಸುತ್ತದೆ ಎಂದು ಹೇಳಿದೆ.

ADVERTISEMENT

ನ್ಯಾಯಮೂರ್ತಿ ಯು.ಯು. ಲಲಿತ್‌ ನೇತೃತ್ವದ ನ್ಯಾಯಪೀಠ, ಈ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳಲಿದೆ

2016ರಲ್ಲಿ ಧಾರವಾಡದ ಸಪ್ತಾಪುರದ ಜಿಮ್‌ನಲ್ಲಿ ಯೋಗೇಶ್‌ಗೌಡ ಗೌಡರ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು, 2019ರಲ್ಲಿ ರಾಜ್ಯ ಸರ್ಕಾರವು ಸಿಬಿಐಗೆ ಒಪ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.