ADVERTISEMENT

ಸಿಬಿಎಸ್‌ಇ, ಐಸಿಎಸ್‌ಇಯ 10, 12ನೇ ತರಗತಿಗಳ ಬಾಕಿ ಪರೀಕ್ಷೆಗಳು ರದ್ದು 

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 9:56 IST
Last Updated 25 ಜೂನ್ 2020, 9:56 IST
ಪರೀಕ್ಷಾ ಕೊಠಡಿಯೊಂದರ ಪ್ರಾತಿನಿಧಿಕ ಚಿತ್ರ
ಪರೀಕ್ಷಾ ಕೊಠಡಿಯೊಂದರ ಪ್ರಾತಿನಿಧಿಕ ಚಿತ್ರ   

ನವದೆಹಲಿ: ಜುಲೈ ಒಂದರಿಂದ 15ರವರೆಗೆ ನಡೆಯಬೇಕಾಗಿದ್ದ ಸಿಬಿಎಸ್‌ಇ ಪಠ್ಯಕ್ರಮದ 10 ಮತ್ತು 12ನೇ ತರಗತಿಯ ಬಾಕಿ ಇರುವ ವಿಷಯಗಳ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಸಿಬಿಎಸ್‌ಇ ಮತ್ತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಗುರುವಾರ ತಿಳಿಸಿವೆ. ಸರ್ಕಾರದ ಈ ನಿರ್ಧಾರಕ್ಕೆ ಐಸಿಎಸ್‌ಇ ಸಮ್ಮತಿ ಸೂಚಿಸಿದೆ.

ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡಿರುವ 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಬೇಕಿದ್ದರೆ, ಅಸೆಸ್‌ಮೆಂಟ್‌ ಸ್ಕೀಂ ಅನ್ನೂ ಆರಿಸಿಕೊಳ್ಳಬಹುದು. ಅದಕ್ಕೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಕೇಂದ್ರದ ಮಾಹಿತಿಯನ್ನು ಪರಿಗಣಿಸಿದಸುಪ್ರೀಂ ಕೋರ್ಟ್‌, ಪರೀಕ್ಷೆಗಳಿಗೆ ಸಂಬಂಧಿಸಿದ ಅನುಮಾನಗಳನ್ನು ನಿವಾರಿಸಲು ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಸಿಬಿಎಸ್‌ಇಗೆ ತಿಳಿಸಿದೆ.

ADVERTISEMENT

ಇದೇ ವೇಳೆ, ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಸಿಬಿಎಸ್‌ಇ ಪರೀಕ್ಷೆಗಳನ್ನು ನಡೆಸಲು ಶಕ್ತವಾಗಿಲ್ಲ ಎಂದು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟವು.

ಉಳಿದ ಪರೀಕ್ಷೆಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಐಸಿಎಸ್‌ಇ ಕೂಡ ಒಪ್ಪಿಕೊಂಡಿದೆ. ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಈ ಪರಿಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಬಾಕಿ ಉಳಿದಿರುವ ಪರೀಕ್ಷೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಅದು ಐಸಿಎಸ್‌ಇಯನ್ನು ಕೇಳಿತ್ತು.

ಸಿಬಿಎಸ್‌ಇ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಕಳೆದ ಮೂರು ಪರೀಕ್ಷೆಗಳ ಅಂಕಗಳಿಕೆಯಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.