ADVERTISEMENT

ಸಿಬಿಎಸ್‌ಇ: 10,12ನೇ ತರಗತಿ ಪರೀಕ್ಷೆಗಳಿಗೆ ದೇಶದಾದ್ಯಂತ 15,000 ಪರೀಕ್ಷಾ ಕೇಂದ್ರ

ಪಿಟಿಐ
Published 25 ಮೇ 2020, 11:27 IST
Last Updated 25 ಮೇ 2020, 11:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಸಿಬಿಎಸ್‌ಇ10 ಮತ್ತು 12ನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷೆಗಳನ್ನು ದೇಶದಾದ್ಯಂತವಿರುವ 15,000 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಸೋಮವಾರ ಹೇಳಿದ್ದಾರೆ. ಈ ಹಿಂದೆ 3,000 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲುಸಿಬಿಎಸ್‌ಇ ತೀರ್ಮಾನಿಸಿತ್ತು .

ವಿದ್ಯಾರ್ಥಿಗಳು ದೂರ ಪ್ರಯಾಣಿಸುವುದನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಂಡಿದ್ದು, ಪರೀಕ್ಷಾ ಹಾಲ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲಾಗುವುದುಎಂದು ಸಚಿವರು ಹೇಳಿದ್ದಾರೆ.

ಕೋವಿಡ್-19 ನಿಂದಾಗಿ ಮಾರ್ಚ್ 25ರಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ್ದ ಕಾರಣ ಪರೀಕ್ಷೆ ಮುಂದೂಡಲಾಗಿತ್ತು. ಹೀಗೆ ಮುಂದೂಡಿದ ಪರೀಕ್ಷೆಗಳನ್ನು ಜುಲೈ1ರಿಂದ 15ರ ವರೆಗೆ ನಡೆಸಲಾಗುವುದು.

ಹೊರಗಿನ ಪರೀಕ್ಷಾ ಕೇಂದ್ರಗಳ ಬದಲು ಆಯಾ ಶಾಲೆಯಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾನವಸಂಪನ್ಮೂಲ ಸಚಿವಾಲಯ ಹೇಳಿತ್ತು.ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಕೋವಿಡ್-19 ಕಂಟೇನ್ಮೆಂಟ್ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಿರುವುದಿಲ್ಲ. ವಿದ್ಯಾರ್ಥಿಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಹೊಣೆ ರಾಜ್ಯ ಸರ್ಕಾರದ್ದಾಗಿರುತ್ತದೆ.

ಸಾಮಾನ್ಯವಾಗಿ ಈ ಪರೀಕ್ಷೆಗಳು ಹೊರಗಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಅಲ್ಲಿ ಹೊರಗಿನ ಶಿಕ್ಷಕರೇ ಪರೀಕ್ಷೆ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸುತ್ತಾರೆ.

12ನೇ ತರಗತಿಯ ಪರೀಕ್ಷೆ ದೇಶದಾದ್ಯಂತ ನಡೆಯಲಿದೆ. 10ನೇ ತರಗತಿ ಪರೀಕ್ಷೆ ಈಶಾನ್ಯ ದೆಹಲಿಯಲ್ಲಿ ಮಾತ್ರ ಬಾಕಿ ಉಳಿದಿತ್ತು. ಸಿಎಎ ವಿರುದ್ಧ ಪ್ರತಿಭಟನೆಗಳಿಂದಾಗಿ ಆ ಪ್ರದೇಶದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ. ಬಾಕಿ ಉಳಿದಿರುವ 29 ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವುದಾಗಿ ಕಳೆದ ತಿಂಗಳು ಸಿಬಿಎಸ್‌ಇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.