ADVERTISEMENT

ಜನಸಂಖ್ಯಾ ನೋಂದಣಿಗಾಗಿ ₹ 3,941 ಕೋಟಿ ಮಂಜೂರು: ಗೊಂದಲ ಮೂಡಿಸಿದ ಕೇಂದ್ರದ ನಡೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 2:31 IST
Last Updated 25 ಡಿಸೆಂಬರ್ 2019, 2:31 IST
ಪ್ರಕಾಶ್ ಜಾವಡೇಕರ್‌
ಪ್ರಕಾಶ್ ಜಾವಡೇಕರ್‌   

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್‌) ಪರಿಷ್ಕರಣೆಗೆ ₹ 3,941 ಕೋಟಿ ವೆಚ್ಚಕ್ಕೆ ಕೇಂದ್ರ ಸಂಪುಟವು ಮಂಗಳವಾರ ಒಪ್ಪಿಗೆ ಕೊಟ್ಟಿದೆ. ಆದರೆ, ಈಗ ಭಾರಿ ವಿವಾದಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಮೊದಲ ಹಂತವಾಗಿ ಎನ್‌ಪಿಆರ್‌ ಮಾಡಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ‘ಎನ್‌ಆರ್‌ಸಿ ರಚನೆಯ ಮೊದಲ ಹೆಜ್ಜೆ’ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟವಾಗಿ ಹೇಳಿದೆ. 2018–19ರ ವಾರ್ಷಿಕ ವರದಿಯಲ್ಲಿ ಈ ವಿಚಾರ ಇದೆ. ಎರಡು ತಿಂಗಳ ಹಿಂದೆ ಈ ವರದಿಯನ್ನು ಪ್ರಕಟಿಸಲಾಗಿದೆ. ಆದರೆ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ನಡುವೆ ಯಾವ ಸಂಬಂಧವೂ ಇಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

2014ರ ಜುಲೈ–ನವೆಂಬರ್‌ ನಡುವೆ ರಾಜ್ಯಸಭೆಯಲ್ಲಿ ನೀಡಲಾದ ಎರಡು ಉತ್ತರಗಳು ಮತ್ತು ಗೃಹ ಸಚಿವಾಲಯದ 2018–19ರ ವರದಿಯು ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ನಡುವೆ ಸಂಬಂಧ ಇದೆ ಎಂದೇ ಪ್ರತಿಪಾದಿಸುತ್ತವೆ.

ADVERTISEMENT

‘ಎನ್‌ಪಿಆರ್‌ ದತ್ತಾಂಶದ ಆಧಾರದಲ್ಲಿ ಎನ್‌ಆರ್‌ಸಿ ರೂಪಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಕಿರಣ್‌ ರಿಜಿಜು ಅವರು 2014ರ ಜುಲೈ 23ರಂದು ರಾಜ್ಯಸಭೆಯಲ್ಲಿ ಹೇಳಿದ್ದರು. ‘ದೇಶದ ಸಾಮಾನ್ಯ ನಿವಾಸಿಗಳ ಪೌರತ್ವ ಸ್ಥಿತಿಯನ್ನು ಪರಿಶೀಲಿಸಿ ಎನ್‌ಆರ್‌ಸಿ ಸಿದ್ಧಪಡಿಸಲಾಗುವುದು’ ಎಂದು ಅವರು2014ರ ನವೆಂಬರ್‌ 26ರಂದುರಾಜ್ಯಸಭೆಯಲ್ಲಿ ಹೇಳಿದ್ದರು.

ಆದರೆ, ‘ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ’ ಎಂದು ಜಾವಡೇಕರ್‌ ಮಂಗಳವಾರ ಹೇಳಿದ್ದಾರೆ. ‘2010ರಲ್ಲಿ ಯುಪಿಎ ಸರ್ಕಾರವು ಎನ್‌ಪಿಆರ್‌ ನಡೆಸಿತ್ತು. 2020ರಲ್ಲಿಯೂ ಅದೇ ಪ್ರಕ್ರಿಯೆ ನಡೆಯಲಿದೆ. ಆಗ ಇದನ್ನು ಎಲ್ಲರೂ ಸ್ವಾಗತಿಸಿದ್ದರು. ಆ ಪ್ರಕ್ರಿಯೆಯನ್ನು ಈಗ ಜಾರಿಗೆ ತರಲಾಗುತ್ತಿದೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.