ADVERTISEMENT

ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ: ಕೇಂದ್ರ ಒಪ್ಪಿಗೆ

ಪಿಟಿಐ
Published 5 ಫೆಬ್ರುವರಿ 2021, 14:44 IST
Last Updated 5 ಫೆಬ್ರುವರಿ 2021, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2020ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಗೆ ಕೊನೆಯ ಪ್ರಯತ್ನದಲ್ಲಿ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶವನ್ನುಷರತ್ತುಬದ್ಧವಾಗಿ ನೀಡಲು ಒಪ್ಪಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದೆ.

‘2020ರಲ್ಲಿ ನಡೆದಿದ್ದ ನಾಗರಿಕ ಸೇವಾ ಪರೀಕ್ಷೆಗೆ (ಸಿಎಸ್‌ಸಿ) ಹಾಜರಾಗಿದ್ದವರು 2021ರ ಸಾಲಿನ ಸಿಎಸ್‌ಸಿಗೆ ಹಾಜರಾಗಬಹುದು. ಅದೂ ಈ ವರ್ಷದ ಪರೀಕ್ಷೆಗೆ ಹಾಜರಾಗುವ ವಯೋಮಿತಿ ಮೀರಿಲ್ಲದಿದ್ದರೆ ಮಾತ್ರ’ ಎಂದು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಮತ್ತು ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಅವರಿದ್ದ ಪೀಠಕ್ಕೆ ‌ತಿಳಿಸಿದೆ.

‘ಪರೀಕ್ಷೆ ಬರೆಯಲು ನಿಗದಿಪಡಿಸಿರುವ ಪ್ರಯತ್ನಗಳ ಸಂಖ್ಯೆಯನ್ನು ಮೀರಿಲ್ಲದವರಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. ಅಲ್ಲದೇ 2021ರ ಸಾಲಿನ ಪರೀಕ್ಷೆಗೆ ವಯೋಮಿತಿ ಮೀರಿದವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ’ ಎಂದು ಕೇಂದ್ರವು ಸುಪ್ರೀಂಕೊರ್ಟ್‌ಗೆ ಸಲ್ಲಿಸಿರುವ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಸಲಹೆಯ ಮೇರೆಗೆ ಪರೀಕ್ಷಾ ಆಕಾಂಕ್ಷಿಗಳಿಗೆ ಒಂದು ಬಾರಿ ಷರತ್ತುಬದ್ಧ ಅವಕಾಶ ನೀಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಹೇಳಿದ್ದಾರೆ.

ಕೇಂದ್ರ ಸಲ್ಲಿಸಿರುವ ಟಿಪ್ಪಣಿಯನ್ನು ಪ್ರಚಾರಪಡಿಸಲು ಸೂಚಿಸಿದ ನ್ಯಾಯಾಲಯವು, ಅರ್ಜಿದಾರರಿಗೆ ಇದಕ್ಕೆ ಪ್ರತಿಕ್ರಿಯಿಸಲು ಅವಕಾಶ ನೀಡಿ, ಮುಂದಿನ ವಿವಾರಣೆಯನ್ನು ಫೆ.8ಕ್ಕೆ ಮುಂದೂಡಿದೆ.

2020ರ ಅಕ್ಟೋಬರ್‌ನಲ್ಲಿ ನಡೆದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಕೊನೆಯ ಪ್ರಯತ್ನ ಹೊಂದಿದ್ದ ಅಭ್ಯರ್ಥಿಗಳಿಗೆ ಕೊರೊನಾ ಸಾಂಕ್ರಾಮಿಕದಿಂದಾಗಿ ಹೆಚ್ಚುವರಿ ಪ್ರಯತ್ನದ ಅವಕಾಶ ನೀಡುವಂತೆ ಕೋರಿ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.

ಕಳೆದ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಾಜರಾಗದೆ, ಪರೀಕ್ಷೆ ಬರೆಯುವ ಕೊನೆ ಪ್ರಯತ್ನ ಮೀರಿದವರಿಗೆ ಮತ್ತೊಂದು ಅವಕಾಶ ನೀಡಲಾಗದು ಎಂದು ಕೇಂದ್ರ ಸರ್ಕಾರ ಫೆ.1ರಂದು ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.