ADVERTISEMENT

ಪಿಎಫ್ಐ ನಿಷೇಧ: ನ್ಯಾಯಮಂಡಳಿ ಅಧ್ಯಕ್ಷರಾಗಿ ನ್ಯಾ.ಶರ್ಮಾ ನೇಮಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 21:13 IST
Last Updated 6 ಅಕ್ಟೋಬರ್ 2022, 21:13 IST

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಕ್ರಮವನ್ನು ಪರಾಮರ್ಶಿಸಿ ಈ ಸಂಬಂಧ ತೀರ್ಪು ನೀಡಲು ರಚಿಸಲಾಗಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ನ್ಯಾಯಮಂಡಳಿ ಅಧ್ಯಕ್ಷರನ್ನಾಗಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ಕೇಂದ್ರ ಸರ್ಕಾರ ಗುರುವಾರ ನೇಮಿಸಿದೆ.

ಈ ಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಘೋಷಿಸಲು ಸಾಕಷ್ಟು ಕಾರಣವಿದೆಯೇ ಅಥವಾ ಇಲ್ಲವೇ ಎಂಬುದನ್ನು ನ್ಯಾಯಮಂಡಳಿ ಪರಿಶೀಲಿಸುತ್ತದೆ.

ಕೇಂದ್ರ ಸರ್ಕಾರ ಸೆ. 28 ರಂದು ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು, ಆರ್‌ಐಎಫ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಸಿ), ರಾಷ್ಟ್ರೀಯ ಮಾನವ ಹಕ್ಕುಗಳ ಒಕ್ಕೂಟ (ಎನ್‌ಸಿಎಚ್‌ಆರ್‌ಒ), ನ್ಯಾಷನಲ್ ವಿಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್ ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್‌ಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿತ್ತು.

ADVERTISEMENT

ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಹಲವಾರು ಕ್ರಿಮಿನಲ್ ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿವೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಹಾಗೂ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶದಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ ಎಂಬುದು ಹಲವು ವರ್ಷಗಳ ತನಿಖೆಯಲ್ಲಿ ಗೊತ್ತಾಗಿದೆ ಎಂದು ಕೇಂದ್ರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.