ADVERTISEMENT

ಕಾಶ್ಮೀರ ಭದ್ರತೆಗೆ ಹತ್ತು ಸಾವಿರ ಹೆಚ್ಚುವರಿ ಸಿಬ್ಬಂದಿ

ಪಿಟಿಐ
Published 27 ಜುಲೈ 2019, 19:46 IST
Last Updated 27 ಜುಲೈ 2019, 19:46 IST
   

ನವದೆಹಲಿ: ಕಾಶ್ಮೀರ ಕಣಿವೆ ಭಾಗದಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಎಪಿಎಫ್‌) ಸುಮಾರು 10,000 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಸರ್ಕಾರ ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ.

‘ತಕ್ಷಣದಿಂದ ಜಾರಿಗೆ ಬರುವಂತೆ ಸಿಎಪಿಎಫ್‌ನ 100 ತುಕಡಿಗಳನ್ನು ನಿಯೋಜಿಸಲು ಕೇಂದ್ರ ಗೃಹ ಸಚಿ ವಾಲಯ ಆದೇಶಿಸಿದೆ. ಕಣಿವೆಗೆ 100 ತುಕಡಿ ಕಳುಹಿಸುವ ನಿರೀಕ್ಷೆಯಿದೆ’ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಪಿಎಫ್‌ನ ಪ್ರತಿ ತುಕಡಿಯು 10 ಸಿಬ್ಬಂದಿಯನ್ನು ಒಳಗೊಂಡಿದೆ. ಸಿಆರ್‌ಪಿಎಫ್‌ (50 ತುಕಡಿ), ಎಸ್‌ಎಸ್‌ಬಿ (30), ಐಟಿಬಿಪಿ ಮತ್ತು ಬಿಎಸ್‌ಎಫ್‌ನ ತಲಾ ಹತ್ತು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಈ ಸಿಬ್ಬಂದಿಯನ್ನು ಕಾಶ್ಮೀರ ಕಣಿವೆಯಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ ಹಾಗೂ ಭದ್ರತೆ ಬಲಪಡಿಸಲು ಬಳಸಲಾಗುವುದು. ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ನಿಯೋಜಿಸಲಾದ ತುಕಡಿಗಳನ್ನು ಸದ್ಯ ಉಗ್ರರ ವಿರೋಧಿ ಕಾರ್ಯಾಚರಣೆಗೂ ತೊಡಗಿಸಲಾಗುತ್ತಿದೆ’ ಎಂದು ತಿಳಿದುಬಂದಿದೆ. ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಈಗಾಗಲೇ ಕಾಶ್ಮೀರ ಕಣಿವೆಗೆ ಕೇಂದ್ರ ಮೀಸಲು ಪೊಲೀಸ್‌ ಪಡೆಯ 65 ಸಾಮಾನ್ಯ ತುಕಡಿಗಳು, ಇತರೆ 20 ತುಕಡಿಗಳನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ನಡೆಯಲಿರುವ ಚುನಾವಣೆ ಬಂದೋಬಸ್ತ್‌ ಕಾರ್ಯಕ್ಕೂ ಈ ಸಿಬ್ಬಂದಿ ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಮೆಹಬೂಬಾ ಮುಫ್ತಿ ಟೀಕೆ: ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 100 ತುಕಡಿಗಳನ್ನು ನಿಯೋಜಿಸುವ ಕೇಂದ್ರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟೀಕಿಸಿದ್ದಾರೆ. ‘ಜಮ್ಮು ಮತ್ತು ಕಾಶ್ಮೀರದ್ದು ರಾಜಕೀಯ ಸಮಸ್ಯೆ. ಭದ್ರತಾ ಪಡೆಗಳಿಂದ ಇದಕ್ಕೆ ಪರಿಹಾರ ಪಡೆಯಲಾಗದು’ ಎಂದು ಹೇಳಿದ್ದಾರೆ.

ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಅಧ್ಯಕ್ಷೆಯೂ ಆಗಿರುವ ಮೆಹಬೂಬಾ ಅವರು, ‘ಕೇಂದ್ರ ಸರ್ಕಾರ ತನ್ನ ಕಾಶ್ಮೀರ ನೀತಿಯನ್ನು ಮರು ಪರಿಶೀಲಿಸುವುದು ಸೂಕ್ತ’ ಎಂದು ಆಭಿಪ್ರಾಯಪಟ್ಟಿದ್ದಾರೆ.

‘ಭದ್ರತಾ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ’

ಹೈದರಾಬಾದ್‌ (ಪಿಟಿಐ): ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಭದ್ರತಾ ಪಡೆಗಳಿಗೆ ಎನ್‌ಡಿಎ ಸರ್ಕಾರ ‘ಮುಕ್ತ ಸ್ವಾತಂತ್ರ್ಯ’ ನೀಡಿದೆ ಎಂದು ಕೇಂದ್ರದ ಗೃಹಖಾತೆ ರಾಜ್ಯ ಸಚಿವ ಜಿ.ಕಿಶನ್‌ ರೆಡ್ಡಿ ಶನಿವಾರ ಹೇಳಿದರು.

ಸಿಆರ್‌ಪಿಎಫ್‌ನ 81ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಎಲ್ಲ ಆಂತರಿಕ ಭದ್ರತಾ ಸಮಸ್ಯೆಗಳನ್ನು ಸರ್ಕಾರ ದೃಢವಾಗಿ ನಿಭಾಯಿಸಲಿದೆ’ ಎಂದು ಹೇಳಿದರು. ಮಾವೋವಾದಿಗಳ ಹಿಂಸೆಗೆ ಕಡಿವಾಣ ಹಾಕುವಲ್ಲಿ ಸಿಆರ್‌ಪಿಎಫ್‌ನ ಪಾತ್ರವನ್ನು ಸಚಿವರು ಶ್ಲಾಘಿಸಿದರು.

'ನಿಮಗೆ ಇತ್ತೀಚಿನ ಬಾಲಾಕೋಟ್‌ ದಾಳಿ, ಪುಲ್ವಾಮಾ ದಾಳಿ ಗೊತ್ತಿದೆ. ಹಿಂದೆ ಇದೆಲ್ಲವೂ ಇತ್ತೆ. ಮೊದಲು ನಾವು ಪ್ರತಿರೋಧಕ್ಕೆ ತುತ್ತಾಗುತ್ತಿದ್ದೆವು. ಈಗ ಪ್ರಧಾನಿ ಮೋದಿ ನೇತೃತ್ವದಲ್ಲಿ ಭದ್ರತಾ ಪಡೆಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಇಂಥ ಮುಕ್ತ ಅವಕಾಶ ಮೊದಲು ಇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.