ADVERTISEMENT

ವಿಶ್ವದ ಹಲವೆಡೆ ಕೋವಿಡ್ ಹೆಚ್ಚಳ: ಅಧಿಕಾರಿಗಳ ಜೊತೆ ಮಾಂಡವೀಯ ಪರಿಶೀಲನಾ ಸಭೆ

ಪಿಟಿಐ
Published 21 ಡಿಸೆಂಬರ್ 2022, 10:07 IST
Last Updated 21 ಡಿಸೆಂಬರ್ 2022, 10:07 IST
   

ನವದೆಹಲಿ: ಜಗತ್ತಿನ ವಿವಿಧ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅಧಿಕಾರಿಗಳ ಜೊತೆ ದೇಶದ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದರು. ಅಲ್ಲದೆ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ತಜ್ಞರ ಜೊತೆ ಇಂದು ದೇಶದಲ್ಲಿ ಕೋವಿಡ್ ಸ್ಥಿತಿ ಕುರಿತಂತೆ ಪರಿಶೀಲನಾ ಸಭೆ ನಡೆಸಿದೆ. ಕೋವಿಡ್ ಇನ್ನೂ ಅಂತ್ಯಗೊಂಡಿಲ್ಲ. ಸಂಬಂಧಿತ ಎಲ್ಲ ಅಧಿಕಾರಿಗಳಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲಿಗೆ ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಮಾಳವೀಯ ಟ್ವೀಟ್ ಮೂಲಕ ತಿಳಿಸಿದ್ಧಾರೆ.

ಆರೋಗ್ಯ, ಫಾರ್ಮಾಸಿಟಿಕಲ್, ಬಯೊಟೆಕ್ನಾಲಜಿ, ಆಯುಷ್ ಇಲಾಖೆಯ ಅಧಿಕಾರಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಡಿಜಿ ರಾಜೀವ್ ಬಹ್ಲ್, ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್, ಲಸಿಕೀಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ(ಎನ್‌ಟಿಎಜಿಐ) ಅಧ್ಯಕ್ಷ ಡಾ.ಎನ್.ಕೆ. ಅರೋರಾ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಜಪಾನ್, ಅಮೆರಿಕ, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಚೀನಾ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕೊರೊನಾದ ಹೊಸ ತಳಿಗಳನ್ನು ಪತ್ತೆ ಮಾಡುವ ದೃಷ್ಟಿಯಿಂದ ಹೊಸದಾಗಿ ಪತ್ತೆಯಾದ ಕೋವಿಡ್ ಪ್ರಕರಣಗಳ ಜಿನೋಮ್ ಪರೀಕ್ಷೆ ಹೆಚ್ಚಿಸುವಂತೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಈ ಕುರಿತಂತೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಕೊರೊನಾದ ಹೊಸ ತಳಿಗಳ ಪತ್ತೆಗೆ ಜಿನೋಮ್ ಪರೀಕ್ಷೆ ತೀವ್ರಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ.

ದೇಶದ ಎಲ್ಲ ನಾಗರಿಕರು ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಬೇಕು ಮತ್ತು ವೈರಸ್ ಹರಡುವಿಕೆ ತಡೆಗೆ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಮಾಂಡವೀಯ ಜೊತೆಗಿನ ಸಭೆ ಬಳಿಕ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಒತ್ತಾಯಿಸಿದ್ದಾರೆ.

‘ದೇಶದಲ್ಲಿ ಸದ್ಯ ಶೇಕಡ 27–28ರಷ್ಟು ಜನರು ಮಾತ್ರ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರೂ ಸೇರಿದಂತೆ ಉಳಿದ ಎಲ್ಲ ನಾಗರಿಕರು ಲಸಿಕೆ ಪಡೆಯಬೇಕು’ಎಂದು ಅವರು ಹೇಳಿದ್ದಾರೆ.

‘ಒಳಾಂಗಣ ಅಥವಾ ಹೊರಾಂಗಣ ಎಲ್ಲಿಯೇ ಇದ್ದರೂ ಜನಜಂಗುಳಿ ಇದ್ದಾಗ ಮಾಸ್ಕ್ ಬಳಸಿ. ವಿಶೇಷವಾಗಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅಥವಾ ಹಿರಿಯ ನಾಗರಿಕರು ಈ ನಿಯಮ ಪಾಲಿಸುವುದು ಮುಖ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.