ADVERTISEMENT

ಬಂಡೀಪುರ ರಸ್ತೆಗೆ ಪರ್ಯಾಯ ಮಾರ್ಗ: ‘ಸುಪ್ರೀಂ’ಗೆ ಪ್ರಸ್ತಾವ ಸಲ್ಲಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 23:34 IST
Last Updated 15 ನವೆಂಬರ್ 2019, 23:34 IST

ನವದೆಹಲಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ– 212ಕ್ಕೆ ಪರ್ಯಾಯವಾಗಿ, ರಾಜ್ಯ ಹೆದ್ದಾರಿ– 89 ಮತ್ತು 90ರ ಮೂಲಕ ಕೇರಳ ಸಂಪರ್ಕಿಸುವ ಮಾರ್ಗವನ್ನು ಅಭಿವೃದ್ಧಿಪಡಿಸಬಹುದು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಈ ಪ್ರದೇಶದಲ್ಲಿರುವ ವನ್ಯಜೀವಿಗಳಿಗೆ ವಾಹನ ಸಂಚಾರದಿಂದ ಎದುರಾಗುವ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ಹೇರಿದ್ದ ರಾತ್ರಿ ವಾಹನ ಸಂಚಾರ ನಿಷೇಧದ ತೆರವು ಕೋರಿದ್ದ ಕೇರಳದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ಗೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಶುಕ್ರವಾರ ಸಲ್ಲಿಸಿರುವ ಹೇಳಿಕೆಯಲ್ಲಿ ಈ ಕುರಿತ ಪ್ರಸ್ತಾವನೆ ಸಲ್ಲಿಸಿದೆ.

ರಾಜ್ಯದ ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್‌ ಬತ್ತೇರಿಗೆ ಸಂಪರ್ಕ ಕಲ್ಪಿಸಲು ಮಡಿಕೇರಿ– ಗೋಣಿಕೊಪ್ಪ– ಕುಟ್ಟ (98 ಕಿಲೋಮೀಟರ್ ಅಂತರ) ನಡುವಿನ ರಾಜ್ಯ ಹೆದ್ದಾರಿ– 89 ಹಾಗೂ ಹುಣಸೂರು– ತಲಕಾವೇರಿ (113 ಕಿಲೋ ಮೀಟರ್‌) ನಡುವಿನ ರಾಜ್ಯ ಹೆದ್ದಾರಿ–90, ತಲಶ್ಯೇರಿ– ಬಾವಲಿ (ಜಿಲ್ಲಾ ರಸ್ತೆ), ಕಲ್ಪೆಟ್ಟಾ– ತೋಳ್ಪಟ್ಟಿ (ಜಿಲ್ಲಾ ರಸ್ತೆ) ಮಾರ್ಗವನ್ನು ಅಭಿವೃದ್ಧಿಪಡಿಸಬಹುದು.

ADVERTISEMENT

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳ ಅಧಿಕಾರಿಗಳನ್ನು ಒಳಗೊಂಡಿದ್ದ ಸಮಿತಿಯು ಈ ಪರ್ಯಾಯ ಮಾರ್ಗವನ್ನು ಸೂಚಿಸಿದೆ ಎಂದು ಕೇಂದ್ರ ತಿಳಿಸಿದೆ.

ಕರ್ನಾಟಕದಲ್ಲಿರುವ ಎರಡೂ ರಾಜ್ಯ ಹೆದ್ದಾರಿಗಳಲ್ಲಿ ದ್ವಿಪಥವು ಅಭಿವೃದ್ಧಿಯಾಗಿದೆ. ಕೇರಳದಲ್ಲಿರುವ ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಅಲ್ಲಿನ ಸರ್ಕಾರ ಸ್ವಂತ ವೆಚ್ಚದಲ್ಲೇ ಅಭಿವೃದ್ಧಿಪಡಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಸಂಬಂಧಿಸಿದ ಸಚಿವಾಲಯಗಳ ಅಗತ್ಯ ಪರವಾನಗಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಲಹೆಯಾಗಿದೆ.

ಈ ರಸ್ತೆಗಳು ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದಿದ ನಂತರವೇ ರಾಷ್ಟ್ರೀಯ ಹೆದ್ದಾರಿಯ ಸ್ಥಾನಮಾನ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದೂ ಕೇಂದ್ರ ಹೇಳಿದೆ.

ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್‌ ಹಾಗೂ ಎಸ್‌.ರವೀಂದ್ರ ಭಟ್‌ ನೇತೃತ್ವದ ದ್ವಿಸದಸ್ಯ ಪೀಠ ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.