ADVERTISEMENT

ಶೇಕಡ 25ರಷ್ಟು ರಸ್ತೆ ತೆರಿಗೆ ವಿನಾಯಿತಿ ನೀಡಲು ರಾಜ್ಯಗಳಿಗೆ ಸೂಚನೆ -ಗಡ್ಕರಿ

ಗುಜರಿ ನೀತಿ ಅನ್ವಯ ಹೊಸ ವಾಹನಗಳ ಖರೀದಿ: ಶೀಘ್ರ ನಿಯಮಗಳು ಜಾರಿ

ಪಿಟಿಐ
Published 18 ಆಗಸ್ಟ್ 2021, 6:20 IST
Last Updated 18 ಆಗಸ್ಟ್ 2021, 6:20 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ಹೊಸ ಗುಜರಿ ನೀತಿ ಅನ್ವಯ, ಹಳೆ ವಾಹನಗಳನ್ನು ಗುಜರಿಗೆ ಹಾಕಿದ ಬಳಿಕ ಖರೀದಿಸುವ ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ಶೇಕಡ 25ರಷ್ಟು ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರವು ಶೀಘ್ರ ರಾಜ್ಯ ಸರ್ಕಾರಗಳಿಗೆ ಕೋರಲಿದೆ.

’ವಿನಾಯಿತಿ ನೀಡುವ ವಿಷಯವು ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ. ಇದು ಕೇವಲ ಸಾರ್ವಜನಿಕ ಹಿತಾಸಕ್ತಿ ವಿಷಯ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

‘ರಾಷ್ಟ್ರೀಯ ಆಟೊಮೊಬೈಲ್‌ ಗುಜರಿ ನೀತಿ ಅನುಷ್ಠಾನಗೊಂಡ ಬಳಿಕ ರಾಜ್ಯಗಳ ಆದಾಯವು ಹೆಚ್ಚಲಿದೆ. ಈ ಬಗ್ಗೆ ಯಾವುದೇ ರೀತಿಯ ಆತಂಕ ಬೇಡ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ರಸ್ತೆ ತೆರಿಗೆಗೆ ವಿನಾಯಿತಿ ನೀಡುವಂತೆ ರಾಜ್ಯಗಳಿಗೆ ಕೇವಲ ಸಲಹೆ ನೀಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರುತ್ತೇವೆ. ವೈಯಕ್ತಿಕ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ ಶೇಕಡ 25ರಷ್ಟು ಮತ್ತು ವಾಣಿಜ್ಯ ಉದ್ದೇಶದ ವಾಹನಗಳಿಗೆ ಶೇಕಡ 15ರವರೆಗೆ ವಿನಾಯಿತಿ ನೀಡುವಂತೆ ನಿಯಮಗಳನ್ನು ರೂಪಿಸಲಾಗುವುದು’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಮಿತ್‌ ವರದನ್‌ ತಿಳಿಸಿದ್ದಾರೆ.

‘ಸಮವರ್ತಿ ಪಟ್ಟಿ ಅಡಿಯಲ್ಲಿ ತೆರಿಗೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಹೀಗಾಗಿ, ನಿಯಮಗಳಲ್ಲಿ ಬದಲಾವಣೆ ತರುತ್ತಿದ್ದೇವೆ. ಶೀಘ್ರ ಹೊಸ ನಿಯಮಗಳು ಜಾರಿಗೆ ಬರಲಿವೆ’ ಎಂದು ಅವರು ಹೇಳಿದ್ದಾರೆ.

2021–22ನೇ ಸಾಲಿನ ಬಜೆಟ್‌ನಲ್ಲಿ ಗುಜರಿ ನೀತಿ ಪ್ರಕಟಿಸಲಾಗಿತ್ತು. ವೈಯಕ್ತಿಕ ವಾಹನಗಳನ್ನು 20 ವರ್ಷಗಳ ಬಳಿಕ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಬೇಕು. ವಾಣಿಜ್ಯ ಉದ್ದೇಶದ ವಾಹನಗಳನ್ನು 15 ವರ್ಷಗಳ ಬಳಿಕ ಸಾಮರ್ಥ್ಯದ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ದೆಹಲಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಡಿ) ನೀಡಿದ ಆದೇಶದ ಅನ್ವಯ ನೀತಿಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ದೆಹಲಿಯಲ್ಲಿ 10 ವರ್ಷಗಳ ಹಳೆಯದಾದ ಎಲ್ಲ ಡೀಸೆಲ್‌ ವಾಹನಗಳನ್ನು ನಿಷೇಧಿಸಿ ಎನ್‌ಜಿಟಿ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ನಿತಿನ್‌ ಗಡ್ಕರಿ ಅವರು, ‘ನಾವು ಎನ್‌ಜಿಟಿ ಆದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಆದೇಶವನ್ನು ಪುನರ್‌ ಪರಿಶೀಲಿಸುವಂತೆ ಕೋರಿ ದೆಹಲಿ ಸರ್ಕಾರವು ಮನವಿ ಸಲ್ಲಿಸಲು ಅವಕಾಶವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.