ADVERTISEMENT

ಔಷಧ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ನೀತಿ: ಮಾಂಡವೀಯ

ಪಿಟಿಐ
Published 18 ಡಿಸೆಂಬರ್ 2021, 11:34 IST
Last Updated 18 ಡಿಸೆಂಬರ್ 2021, 11:34 IST
   

ಗಾಂಧಿನಗರ: ಔಷಧ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಹಕ್ಕುಸ್ವಾಮ್ಯ ಹೊಂದಲು ಉತ್ತೇಜನ ನೀಡುವುದಕ್ಕಾಗಿ ನೀತಿ ರೂಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದಾರೆ.

ಇಲ್ಲಿ ನಡೆದ ‘ಉಜ್ವಲ ಗುಜರಾತ್ ಜಾಗತಿಕ ಶೃಂಗ’ದಲ್ಲಿ ಮಾತನಾಡಿದ ಅವರು,ಜೆನರಿಕ್‌ ಔಷಧಗಳ ಬಳಕೆಗೆ ಇರುವ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಲು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತವು ಈಗ ಜೆನರಿಕ್‌ ಔಷಧಗಳನ್ನು ಜಗತ್ತಿಗೇ ಅತ್ಯಧಿಕವಾಗಿ ಪೂರೈಸುತ್ತಿದೆ. ಆದರೆ, ಸ್ಥಳೀಯವಾಗಿ ಜನರು ಬ್ರಾಂಡೆಡ್‌ ಔಷಧಗಳನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತಿದೆ ಎಂದು ಹೇಳಿದರು.

ADVERTISEMENT

ಒಟ್ಟಾರೆ 109 ಕೋಟಿ ಕುಟುಂಬಗಳಿಗೆ ಆರೋಗ್ಯಸೇವೆ ಕೈಗೆಟುಕುವಂತೆ ಕೇಂದ್ರ ಸರ್ಕಾರವು ನೀತಿ ರೂಪಿಸುತ್ತಿದೆ. ಇದರಿಂದ, ಔಷಧ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿದೆ. ಔಷಧ ಸಂಶೋಧನೆಗೆ ಅನ್ವಯಿಸಿ ರೂಪಿಸಿದ ನೀತಿಯಿಂದ ಕಂಪನಿಗಳಿಗೆ ಸಂಶೋದನೆಗೆ ಅನುಮತಿ ನೀಡಲು ತಗಲುವ ಅವಧಿ ಇಳಿಯಲಿದೆ ಎಂದರು.

ಆದರೆ, ದೇಶವು ಕೇವಲ ಜೆನರಿಕ್‌ ಔಷಧಗಳ ಉತ್ಪಾದನೆಗಷ್ಟೇ ಸೀಮಿತವಾಗಬಾರದು. ಔಷಧಗಳ ಸಂಶೋಧನೆಗೂ ಹೆಚ್ಚಿನ ಒತ್ತು ನೀಡಿ, ಜಾಗತಿಕ ಮಾರುಕಟ್ಟೆಗೆ ಪೂರೈಸಲು ಸಜ್ಜಾಗಬೇಕು ಎಂದು ಹೇಳಿದರು.

ಕಡುಬಡವರಿಗೂ ವೈದ್ಯಕೀಯ ಸೇವೆ ಲಭಿಸಬೇಕು ಎಂಬ ಗುರಿಯೊಂದಿಗೆ ಪ್ರಧಾನಮಂತ್ರಿಗಳು ಆರಂಭಿಸಿದ್ದ ವೆಲ್‌ನೆಸ್‌ ಕೇಂದ್ರಗಳ ಸಂಖ್ಯೆ ಈಗ 90 ಸಾವಿರಕ್ಕೆ ಮುಟ್ಟಿದೆ. ಮುಂದಿನ ವರ್ಷ 1.5 ಲಕ್ಷಕ್ಕೆ ಏರಲಿದೆ. ಒಟ್ಟಾರೆ 8,500 ಜನೌಷಧ ಕೇಂದ್ರಗಳಿದ್ದು, ಜನತೆಗೆ ಅಗ್ಗದ ದರದಲ್ಲಿ ಜೆನರಿಕ್‌ ಔಷಧಗಳನ್ನು ಒದಗಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.