ADVERTISEMENT

ಕೇಂದ್ರೀಯ ವಿ.ವಿಗಳ ಪ್ರವೇಶಕ್ಕೆ ಸಿಇಟಿ; ಎನ್‌ಟಿಎ ಮೂಲಕ ಪ್ರವೇಶ ಪರೀಕ್ಷೆ

ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಟಿಎ ಮೂಲಕ ಪ್ರವೇಶ ಪರೀಕ್ಷೆ

ಪಿಟಿಐ
Published 30 ನವೆಂಬರ್ 2021, 20:31 IST
Last Updated 30 ನವೆಂಬರ್ 2021, 20:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುವುದು. ಇದನ್ನುರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತಿಳಿಸಿದೆ.

ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಪತ್ರ ಬರೆದಿರುವ ಯುಜಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಸಿಇಟಿಯನ್ನು ಕನಿಷ್ಠ 13 ಭಾಷೆಗಳಲ್ಲಿ ಎನ್‌ಟಿಎ ನಡೆಸಲಿದೆ ಎಂದೂ ತಿಳಿಸಿದೆ.

ಈ ಸಿಇಟಿಯನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರುವ ರಾಜ್ಯಗಳ ವಿಶ್ವವಿದ್ಯಾಲಯಗಳು, ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಿಗೂ ಅವಕಾಶ ನೀಡಲಾಗುವುದು ಎಂದು ಯುಜಿಸಿ ಪತ್ರದಲ್ಲಿ ಉಲ್ಲೇಖಿಸಿದೆ.

ADVERTISEMENT

ಹೊಸ ಶಿಕ್ಷಣ ನೀತಿಯು (ಎನ್‌ಇಪಿ) ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎನ್‌ಟಿಎ ಮೂಲಕ ಸಿಇಟಿ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವಂತೆ ಶಿಫಾರಸು ಮಾಡಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು 2021ನೇ ಸಾಲಿನಿಂದಲೇ ಇದನ್ನು ಜಾರಿಗೊಳಿಸುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ ಕೋವಿಡ್‌ ಪಿಡುಗಿನ ಕಾರಣದಿಂದ ಅದು ಸಾಕಾರವಾಗಲಿಲ್ಲ.

ಪಿಎಚ್.ಡಿ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಎನ್‌ಇಟಿ) ಅಂಕಗಳನ್ನು ಎಲ್ಲೆಲ್ಲಿ ಸಾಧ್ಯವೊ ಅಲ್ಲಿ ಬಳಸುವಂತೆಯೂ ಯುಜಿಸಿ ಪತ್ರದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.