ADVERTISEMENT

ಸಿಬಿಐಗೆ ಕೆಂಪು ಬಾವುಟ ತೋರಿಸಿದ ಆಂಧ್ರಪ್ರದೇಶ ಸರ್ಕಾರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 10:54 IST
Last Updated 16 ನವೆಂಬರ್ 2018, 10:54 IST
   

ಹೈದರಾಬಾದ್‌: ಎನ್‌ಡಿಎ ಮೈತ್ರಿಕೂಟದಿಂದ ಇತ್ತೀಚೆಗೆ ಹೊರಗೆ ಬಂದು ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರದ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕೆ ಸಿಬಿಐಗೆ ನೀಡಲಾಗಿದ್ದ ‘ಮುಕ್ತ ಸಮ್ಮತಿ’ಯನ್ನು ಅಲ್ಲಿನ ಸರ್ಕಾರ ವಾಪಸ್‌ ಪಡೆದಿದೆ. ರಾಜ್ಯದಲ್ಲಿ ತನಿಖೆ ನಡೆಸುವುದಕ್ಕೆ ಅವಿಭಜಿತ ಆಂಧ್ರ ಪ್ರದೇಶದ ಸರ್ಕಾರ ಸಮ್ಮತಿ ನೀಡಿತ್ತು. ಈಗ, ಹೊಸ ಆದೇಶದ ಮೂಲಕ ಸಿಬಿಐ ಅಧಿಕಾರಿಗಳು ರಾಜ್ಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

‘ಸಿಬಿಐ ಪ್ರಮುಖ ಅಧಿಕಾರಿಗಳ ವಿರುದ್ಧವೇ ಭ್ರಷ್ಟಾಚಾರದ ಆರೋಪ ಬಂದಿದ್ದು, ವಿಶ್ವಾಸಾರ್ಹತೆಗೆ ದಕ್ಕೆಯಾಗಿದೆ ಎಂಬ ಕಾರಣಕ್ಕೆತನಿಖಾಧಿಕಾರವನ್ನು ಹಿಂಪಡೆಯುತ್ತಿದ್ದೇವೆ ಮತ್ತು ಸಿಬಿಐ ಅಧೀನದಲ್ಲಿರುವ ಎಲ್ಲಾ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ಎಸಿಬಿಗೆ ವರ್ಗಾ ಮಾಡಲಾಗುವುದು’ ಎಂದು ಈ ಬಗ್ಗೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ADVERTISEMENT

ದೆಹಲಿ ಪೊಲೀಸ್‌ ಕಾಯ್ದೆ ಪ್ರಕಾರ, ರಾಜ್ಯಗಳಲ್ಲಿ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇಲ್ಲ. ಹಾಗಾಗಿ ಆಂಧ್ರ ಪ್ರದೇಶದಲ್ಲಿ ತನಿಖೆ ನಡೆಸುವುದಕ್ಕಾಗಿ ನೀಡಿದ್ದ ಸಮ್ಮತಿಯನ್ನು ಕಾಲ ಕಾಲಕ್ಕೆ ವಿಸ್ತರಿಸಲಾಗುತ್ತಿತ್ತು.

ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆ ನಡೆಸುವ ಹೊಣೆಯನ್ನು ರಾಜ್ಯದ ಭ್ರಷ್ಟಾಚಾರ ತಡೆ ಘಟಕಕ್ಕೆ (ಎಸಿಬಿ) ಕೊಡಲಾಗಿದೆ. ಹಾಗಾಗಿ, ಆದಾಯ ತೆರಿಗೆ, ಅಂಚೆ, ಕೇಂದ್ರ ಎಕ್ಸೈಸ್‌ ಮತ್ತು ದೂರಸಂಪರ್ಕ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಎಸಿಬಿ ವ್ಯಾಪ್ತಿಗೆ ಬಂದಿದೆ.

ಬಿಜೆಪಿ ಜತೆ ಟಿಡಿಪಿ ಸ್ನೇಹ ಕಡಿದುಕೊಂಡ ಬಳಿಕ ಆಂಧ್ರ ಪ್ರದೇಶದ ಹಲವು ಕಡೆ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದರು. ಟಿಡಿ‍ಪಿ ಮುಖಂಡರಿಗೆ ಹತ್ತಿರವಾಗಿರುವ ಹಲವು ಉದ್ಯಮಿಗಳಿಗೆ ಸೇರಿದ ಸ್ಥಳಗಳಲ್ಲಿಯೂ ತನಿಖೆ ನಡೆದಿತ್ತು. ರಾಜಕೀಯ ದ್ವೇಷ ಸಾಧನೆಗಾಗಿ ಸಿಬಿಐಯನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಟಿಡಿಪಿ ಆರೋಪಿಸಿದೆ. ‘ಆಪರೇಷನ್‌ ಗರುಡ’ ಎಂಬ ಯೋಜನೆಯನ್ನು ಬಿಜೆಪಿ ರೂಪಿಸಿದೆ. ಸಿಬಿಐಯನ್ನು ಬಳಸಿಕೊಂಡು ನಾಯ್ಡು ಸರ್ಕಾರವನ್ನು ಕಿತ್ತೆಸೆಯುವುದು ಇದರ ಉದ್ದೇಶ ಎಂದು ಆಪಾದಿಸಲಾಗಿದೆ.

8ರಂದೇ ಸಮ್ಮತಿ ವಾಪಸ್‌

1946ರ ದೆಹಲಿ ವಿಶೇಷ ಪೊಲೀಸ್‌ ಸಂಸ್ಥೆ ಕಾಯ್ದೆ ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ಈ ಕಾಯ್ದೆ ಪ್ರಕಾರ ದೆಹಲಿಯ ಹೊರಗೆ ತನಿಖೆ ನಡೆಸಲು ಆಯಾ ರಾಜ್ಯಗಳ ಅನುಮತಿ ಪಡೆದುಕೊಳ್ಳಬೇಕು. ಅದಕ್ಕಾಗಿ ರಾಜ್ಯಗಳು ಸಿಬಿಐಗೆ ‘ಮುಕ್ತ ಸಮ್ಮತಿ’ ನೀಡುತ್ತವೆ. ಇಂತಹ ಸಮ್ಮತಿಯನ್ನು ಆಂಧ್ರ ಪ್ರದೇಶ ಸರ್ಕಾರವು ಆಗಸ್ಟ್‌ 3ರಂದು ನವೀಕರಿಸಿತ್ತು. ಆದರೆ, ಇದೇ 8ರಂದು ಈ ಸಮ್ಮತಿಯನ್ನು ವಾಪಸ್‌ ಪಡೆದು ಆದೇಶ ಹೊರಡಿಸಲಾಗಿದೆ. ಈಗ ಈ ಆದೇಶ ಬಹಿರಂಗವಾಗಿದೆ.

ಆದೇಶ ಸಿಕ್ಕಿಲ್ಲ: ಸಿಬಿಐ

‘ತನಿಖಾಧಿಕಾರ ಹಿಂಪಡೆದಿರುವ ಬಗ್ಗೆ ಆಂಧ್ರಪ್ರದೇಶ ಸರ್ಕಾರದಿಂದ ಯಾವುದೇ ಸುತ್ತೋಲೆ ಇಲ್ಲಿಯವರೆಗೆ ನಮಗೆ ಸಿಕ್ಕಿಲ್ಲ. ಅದನ್ನು ನೋಡಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.ಅಗತ್ಯವಿದ್ದರೆ ಕಾನೂನಿನ ಸಲಹೆ ಪಡೆಯಲಾಗುವುದು’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಮಮತಾ ಬೆಂಬಲ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಂಧ್ರಪ್ರದೇಶ ಸರ್ಕಾರದ ಈ ನಡೆಗೆ ಬೆಂಬಲ ಸೂಚಿಸಿದ್ದಾರೆ. ‘ಚಂದ್ರಬಾಬು ನಾಯ್ಡು ಅವರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಸೂಚನೆಗಳನ್ನು ಪಡೆದುಸಿಬಿಐ ಕೆಲಸ ಮಾಡುತ್ತದೆ’ ಎಂದು ದೂರಿದ್ದಾರೆ.

2018ರ ಅಕ್ಟೋಬರ್‌ನಲ್ಲಿ ಇದೇ ರೀತಿ ಛತ್ತೀಸಗಡ ಸರ್ಕಾರವೂ ಅಪರಾಧದ ಬಗ್ಗೆ ತನಿಖೆ ನಡೆಸಲು ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದಿದ್ದ ಆದೇಶವನ್ನು ಸಿಬಿಐ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ‘ಆ ರಾಜ್ಯದಲ್ಲಿ ದಾಖಲಾದ ಪ್ರಕರಣವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಕರಣದ ತನಿಖೆ ನಡೆಸಲು ಸಿಬಿಐ ಯಾರ ಅನುಮತಿಯೂ ಪಡೆಯಬೇಕಿಲ್ಲ’ ಎಂದು ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.