ADVERTISEMENT

ಚಂದ್ರ ಕಕ್ಷೆಯಲ್ಲಿ ಆರ್ಬಿಟರ್‌ ಏಳು ವರ್ಷ ಕಾರ್ಯ ನಿರ್ವಹಣೆ!

ಎಸ್.ರವಿಪ್ರಕಾಶ್
Published 19 ಸೆಪ್ಟೆಂಬರ್ 2019, 9:44 IST
Last Updated 19 ಸೆಪ್ಟೆಂಬರ್ 2019, 9:44 IST
   

ಬೆಂಗಳೂರು: ‘ಚಂದ್ರಯಾನ–2’ ಏಳು ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ಗುರಿಯನ್ನು ಮನಸ್ಸಿನಲ್ಲಿಕೊಂಡು ಇಸ್ರೊ ಕರಾರುವಾಕ್ಕಾಗಿ ಅಭಿವೃದ್ಧಿಪಡಿಸಿದೆ. ಇದರಿಂದ ಆರ್ಬಿಟರ್‌ ಒಂದು ವರ್ಷದ ಬದಲಿಗೆ ಏಳು ವರ್ಷ ಚಂದ್ರನ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ.

‘ವಿಕ್ರಮ್‌’ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶ ಮಾಡದ ಮಾಹಿತಿ ಸಿಗದ ಕಾರಣ ಇಡಿ ದೇಶವೇ ಬೇಸರದಲ್ಲಿರುವಾಗ, ಆರ್ಬಿಟರ್‌ ಕುರಿತು ಹೊಸ ಮಾಹಿತಿಯನ್ನು ಇಸ್ರೊ ಹೊರಹಾಕಿದೆ.

‘ಅತ್ಯಂತ ಸಂಕೀರ್ಣವಾದ ಈ ಯಾನದ ಯೋಜನೆಯನ್ನು ಮುತುವರ್ಜಿಯಿಂದ ರೂಪಿಸ ಲಾಗಿದೆ. ಉಡಾವಣೆಯಿಂದ ಹಿಡಿದು ಲ್ಯಾಂಡರ್‌ ಇಳಿಕೆಯವರೆಗೆ ಎಲ್ಲ ಹಂತಗಳಲ್ಲೂ ಕರಾರುವಾಕ್ಕಾದ ತಯಾರಿ ನಡೆಸಲಾಗಿತ್ತು. ಇದರಿಂದ ಇದು ಅತ್ಯಂತ ದೀರ್ಘ ಕಾಲ ಕಾರ್ಯ ನಿರ್ವಹಿಸಲಿದೆ’ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ವಿಕ್ರಮ್‌ ಕಥೆ ಏನಾಗಿದೆ ಎಂಬುದು ಒಂದೆಡೆಯಾದರೆ, ಇಡೀ ಯೋಜನೆಯ ಯಶಸ್ಸು ಶೇ 90 ರಿಂದ 95 ರಷ್ಟು ಎನ್ನುವುದು ನಿ‌ಸ್ಸಂಶಯ. ಚಂದ್ರನ ಕಕ್ಷೆಯಲ್ಲಿ ಆರ್ಬಿಟರ್‌ ಒಂದು ವರ್ಷಗಳ ಕಾಲ ವಿವಿಧ ಕಾರ್ಯಗಳನ್ನು ನಡೆಸಲು ಯೋಜಿಸಲಾಗಿತ್ತು. ಅಷ್ಟಕ್ಕೇ ಸೀಮಿತವಾಗದೇ ಏಳು ವರ್ಷಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ವಿವಿಧ ಕಾರ್ಯಗಳನ್ನು ನಿರ್ವಹಿಸುವ ಒಟ್ಟು ಎಂಟು ಪೇಲೋಡ್‌ಗಳನ್ನು ಹೊಂದಿದೆ. ಚಂದ್ರನ ಮೇಲ್ಮೈ, ಹವಾಮಾನ, ನೀರು– ಖನಿಜಗಳು, ಚಂದ್ರನ ಉಗಮದ ಬಗ್ಗೆ ಅಧ್ಯಯನ ನಡೆಸಿ ಮಾಹಿತಿಗಳನ್ನು ಕಾಲ ಕಾಲಕ್ಕೆ ಕಳುಹಿಸುತ್ತದೆ’ ಎಂದಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಈವರೆಗೆ ಯಾವುದೇ ದೇಶ ಸಂಶೋಧನೆ, ಅಧ್ಯಯನಕ್ಕೆ ಕೈ ಹಾಕಿಲ್ಲ. ಅಲ್ಲಿ ಮಹತ್ವದ ಅಧ್ಯಯನ ನಡೆಸಿ ಜಗತ್ತಿಗೆ ಹೊಸ ಮಾಹಿತಿ ನೀಡುವುದು ನಮ್ಮ ಉದ್ದೇಶವಾಗಿತ್ತು. ದಕ್ಷಿಣ ಧ್ರುವಕ್ಕೆ ನಮ್ಮ ಬಾಹ್ಯಾಕಾಶ ನೌಕೆ ಇಳಿಯುವುದು ಜಗತ್ತಿಗೇ ಕೌತುಕದ ವಿಚಾರವಾಗಿತ್ತು. ಹೀಗಾಗಿ ಚಂದ್ರಯಾನ–2 ರ ಉಡಾವಣೆಯಿಂದ ಕೊನೆ ಹಂತದವರೆಗೂ ಇಡೀ ವಿಶ್ವವೇ ಅಪಾರ ನಿರೀಕ್ಷೆಯಿಂದ ಕುತೂಹಲ ದಿಂದ ನೋಡಿತ್ತು ಎಂದಿದ್ದಾರೆ.

‘ಒಂದು ಯಾನದ ಮೂಲಕ ವಿವಿಧ ವಿಷಯಗಳನ್ನು ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಚಂದ್ರನ ಹೊರ ಆವರಣ ಮತ್ತು ಮೇಲ್ಮೈಯನ್ನು ಮಾಡುವ ಮೂಲಕ ಚಂದ್ರನ ಕುರಿತ ಅರಿವು ಹೆಚ್ಚಿಸುವ ಉದ್ದೇಶ ಮುಖ್ಯವಾದುದು’ ಎಂದಿದ್ದಾರೆ.

ಆರ್ಬಿಟರ್‌ಗೆ 0.3 ಎಂ ಅತ್ಯಧಿಕ ರೆಸಲ್ಯೂಷನ್‌ ಸಾಮರ್ಥ್ಯದ ಕ್ಯಾಮೆರಾ ಅಳವಡಿಸಲಾಗಿದೆ. ಇದು ಚಂದ್ರನ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಸೆರೆ ಹಿಡಿದು ಕಳಿಸುತ್ತದೆ. ಇದು ಭಾರತವಲ್ಲದೆ, ಜಾಗತಿಕ ವಿಜ್ಞಾನಿಗಳ ಸಮುದಾಯಕ್ಕೂ ಅತಿ ಉಪಯುಕ್ತ ಮಾಹಿತಿ ಆಗುತ್ತದೆ ಎಂದಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿತ್ತು: ಲ್ಯಾಂಡರ್‌ನ ಎಲ್ಲ ಸೆನ್ಸರ್‌ಗಳು ಮತ್ತು ಇತರ ವ್ಯವಸ್ಥೆಗಳು ಸಂಪರ್ಕ ಕಡಿತಗೊಳ್ಳುವ ಹಂತದವರೆಗೆ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದವು. ಲ್ಯಾಂಡರ್‌ನಲ್ಲಿ ‘ವೇರಿಯೆಬಲ್‌ ಥ್ರಸ್ಟ್‌ ಪ್ರೊಪೆಲ್ಷನ್‌ ಟೆಕ್ನಾಲಜಿ’ ಎಂಬ ಹೊಸ ತಂತ್ರಜ್ಞಾನವನ್ನು ಅಳವಡಿಸಿದ್ದೆವು. ಪ್ರತಿಯೊಂದು ಹಂತವನ್ನು ಪಾರು ಮಾಡುವುದನ್ನು ಯಶಸ್ಸು ಎಂದೇ ಪರಿಗಣಿಸಲಾಗುತ್ತದೆ. ಇವತ್ತಿನವರೆಗೆ ಚಂದ್ರಯಾನ–2 ಶೇ 90 ರಿಂದ 95 ರಷ್ಟು ಯಶಸ್ವಿ ಆಗಿದೆ. ಚಂದ್ರ ವಿಜ್ಞಾನಕ್ಕಾಗಿ ಕೊಡುಗೆ ನೀಡುವುದನ್ನು ಇದು ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.