ADVERTISEMENT

ಚಂದ್ರಯಾನ–2: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದತ್ತ ಇಡೀ ಜಗತ್ತಿನ ಚಿತ್ತ

ಶ್ರೀಹರಿಕೋಟಾದಿಂದ ಉಡ್ಡಯನ: ಇಸ್ರೊ ಮೇಲೆ ಜಗತ್ತಿನ ದೃಷ್ಟಿ

ರಶೀದ್ ಕಪ್ಪನ್
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST
ಚಂದ್ರಯಾನ–2ರ ಉಡ್ಡಯನ ವಾಹನ ಜಿಎಸ್‌ಎಲ್‌ವಿ ಮಾರ್ಕ್‌ 3
ಚಂದ್ರಯಾನ–2ರ ಉಡ್ಡಯನ ವಾಹನ ಜಿಎಸ್‌ಎಲ್‌ವಿ ಮಾರ್ಕ್‌ 3   

ಚೆನ್ನೈ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ–2 ಬಾಹ್ಯಾಕಾಶ ಯೋಜನೆ ಕಾರ್ಯಾರಂಭಕ್ಕೆ ಮುನ್ನ ಕೊನೆ ಕ್ಷಣದ ಸಿದ್ಧತೆಗಳು ಭಾನುವಾರ ಪೂರ್ಣಗೊಂಡವು. ಸೋಮವಾರ ಬೆಳಗಿನ ಜಾವ 2.51ಕ್ಕೆ ನೌಕೆ ಉಡ್ಡಯನ ಸಮಯ ನಿಗದಿಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ.

ಉಡ್ಡಯನಕ್ಕೆ ಸಾಕ್ಷಿಯಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರವೇ ಶ್ರೀಹರಿಕೋಟಾಗೆ ಬಂದಿಳಿದರು.
ಕೇಂದ್ರ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ಭದ್ರತಾ ಪಡೆಗಳು ಬಿಗಿ ಬಂದೋಬಸ್ತ್ ಕಲ್ಪಿಸಿದ್ದು,ಬಾಹ್ಯಾಕಾಶ ಕೇಂದ್ರದಿಂದ 11 ಕಿಲೋಮೀಟರ್ ದೂರದಲ್ಲೇ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ.

ಕಾರ್ಯಾಚರಣೆಯನ್ನು ವೀಕ್ಷಿಸಲು ಉಡ್ಡಯನ ಸ್ಥಳದಿಂದ 8 ಕಿಲೋಮೀಟರ್ ದೂರದಲ್ಲಿಸಾರ್ವಜನಿಕರಿಗಾಗಿ ಗ್ಯಾಲರಿ
ನಿರ್ಮಿಸಲಾಗಿದೆ. ‘ಸುರಕ್ಷತೆ ಕಾರಣಕ್ಕೆ ಉಡ್ಡಯನ ಸ್ಥಳದ ಸಮೀಪಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ. ಇಸ್ರೊ ಅಧ್ಯಕ್ಷರೇ 6 ಕಿಲೋಮೀಟರ್ ದೂರದಲ್ಲಿ ಇರಲಿದ್ದಾರೆ’ ಎಂದು ಇಸ್ರೊ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ರಾಕೆಟ್ ಹಾಗೂ ಉಪಕರಣಗಳ ಪರಿಶೀಲನೆ ನಿಗದಿತ ಸಮಯದಲ್ಲಿಯೇ ಮುಕ್ತಾಯವಾಗಿದೆ.

ದೂರದ ಸ್ಥಳವನ್ನು ಕರಾರುವಕ್ಕಾಗಿ ತಲುಪುವುದು, ಚಂದ್ರನ ಕಕ್ಷೆಗೆ ನಿಗದಿತ ಸಮಯದಲ್ಲಿ ಸೇರುವುದು, ದೂಳಿನಿಂದಾಗಬಹುದಾದ ಹಾನಿ ತಡೆಗಟ್ಟುವುದು, ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ನೌಕೆ ಇಳಿಸುವುದು– ಇವು ಚಂದ್ರಯಾನದ ಅಪಾಯಕಾರಿ ಸವಾಲುಗಳು. ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದರೆ, ಭಾರತವು ಈ ಸಾಧನೆ ಮಾಡಿದ ಜಗತ್ತಿನ ನಾಲ್ಕನೇ ದೇಶ ಎನಿಸಿಕೊಳ್ಳಲಿದೆ.‌

ದೂಳಿನ ಆತಂಕ

ಚಂದ್ರನ ಅಂಗಳವು ಕುಳಿ, ಬಂಡೆಗಲ್ಲು ಹಾಗೂ ದೂಳಿನಿಂದ ಕೂಡಿದೆ. ಉಪಕರಣಗಳು ಚಂದ್ರನ ಮೇಲ್ಮೈ ಸಮೀಪಿಸಿದಾಗ ದೂಳಿನಿಂದ ಕೂಡಿದ ಬಿಸಿ ಅನಿಲಗಳ ಪ್ರಭಾವ ಎದುರಿಸಬೇಕಿದೆ.

ದೂಳಿನ ಕಣಗಳು ಗಾತ್ರದಲ್ಲಿಚಿಕ್ಕವಿದ್ದರೂ ಗಟ್ಟಿಯಾಗಿವೆ. ಹೀಗಾಗಿ ಯೋಜನೆಯ ನಿಯೋಜಿತ ಕಾರ್ಯವಿಧಾನಗಳು, ಸೌರಫಲಕಗಳ ಕೆಲಸ ಮತ್ತು ಲ್ಯಾಂಡರ್–ರೋವರ್‌ಗಳ ಸಂವೇದಿ ಕೆಲಸಗಳಿಗೆ ತೊಂದರೆಯಾಗುವ ಆತಂಕ ಇದೆ.

ಚಂದ್ರನ ಮೇಲ್ಮೈನಲ್ಲಿ ತಾಪಮಾನದ ಏರಿಳಿತವಿದೆ. ಜೊತೆಗೆ ನಿರ್ವಾತದ ಒತ್ತಡವೂ ಇದೆ. ಇದು ಲ್ಯಾಂಡರ್ ಮತ್ತು ರೋವರ್‌ ಕಾರ್ಯಾಚರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುತ್ತಾರೆ ಇಸ್ರೊ ಅಧಿಕಾರಿ. ಹೀಗಾಗಿ ಚಂದ್ರಯಾನ ಬಹಳ ಸವಾಲಿನಿಂದ ಕೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.