ADVERTISEMENT

ಎ.ಸಿ. ಬೋಗಿಯ ಅವ್ಯವಸ್ಥೆ: ಫೋಟೊ ಹಂಚಿಕೊಂಡ ಮಹಿಳೆ

ಪಿಟಿಐ
Published 20 ಮಾರ್ಚ್ 2024, 16:12 IST
Last Updated 20 ಮಾರ್ಚ್ 2024, 16:12 IST
ಎಕ್ಸ್‌ ವೇದಿಕೆಯಲ್ಲಿ ಮಹಿಳೆ ಹಂಚಿಕೊಂಡಿರುವ ಚಿತ್ರ
ಎಕ್ಸ್‌ ವೇದಿಕೆಯಲ್ಲಿ ಮಹಿಳೆ ಹಂಚಿಕೊಂಡಿರುವ ಚಿತ್ರ   

ಬೆಂಗಳೂರು: ದೆಹಲಿಯ ಸರೈ ರೋಹಿಲ್ಲಾ ಮತ್ತು ಉದಯಪುರ ನಡುವೆ ಸಂಚರಿಸುವ ‘ಚೇತಕ್‌ ಎಕ್ಸ್‌ಪ್ರೆಸ್‌’ ರೈಲಿನ ಹವಾನಿಯಂತ್ರಿತ ಬೋಗಿ(ಎ.ಸಿ) ಯಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿರುವ ಫೋಟೊವನ್ನು ಪ್ರಯಾಣಿಕೆಯೊಬ್ಬರು ಎಕ್ಸ್ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತೀಯ ರೈಲ್ವೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಫೋಟೊವನ್ನು ಮಹಿಳೆ ಟ್ಯಾಗ್‌ ಮಾಡಿದ್ದು, ಎಕ್ಸ್‌ ಮಾಧ್ಯಮದಲ್ಲಿ ಹಂಚಿಕೊಂಡ 24 ಗಂಟೆಗಳಲ್ಲಿ 16 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.

'ತ್ರಿ ಟೈರ್‌' ಎ.ಸಿ. ಕೋಚ್‌ನಲ್ಲಿ ಹಲವು ಮಂದಿ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಮಹಿಳೆಯು, ‘ಎ.ಸಿ. ಬೋಗಿಯಲ್ಲಿ ಪ್ರಯಾಣಿಸಲು ಹಣ ಪಾವತಿಸಿ, ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವವರಂತೆ ತೊಂದರೆ ಅನುಭವಿಸಬೇಕೆ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಎ.ಸಿ. ಬೋಗಿಯಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಸಾಧ್ಯವಾಗದ ಸ್ಥಿತಿ ಇದೆ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಮಹಿಳೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರೈಲ್ವೆಯು, ಪಿಎನ್‌ಆರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಮತ್ತು ವಿಳಾಸವನ್ನು ಕೇಳಿದೆ.

‘ಚಿತ್ರದಲ್ಲಿರುವುದು ಎ.ಸಿ. ಬೋಗಿಯಾದರೆ ಅದರಲ್ಲಿ ಫ್ಯಾನ್‌ ಕಾಣಿಸುತ್ತಿದೆಯಲ್ಲಾ’ ಎಂದು ಎಕ್ಸ್‌ ಬಳಕೆದಾರರೊಬ್ಬರು ಮಹಿಳೆಯನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬೋಗಿಯಲ್ಲಿನ ಎ.ಸಿ.ಯ ಚಿತ್ರವನ್ನೂ ಮಹಿಳೆ ಹಂಚಿಕೊಂಡಿದ್ದಾರೆ.

‘ವಂದೇ ಭಾರತ್‌ ಮತ್ತು ಬುಲೆಟ್‌ ಟ್ರೈನ್‌ ಸೇವೆ ಒದಗಿಸುವಲ್ಲಿ ಸಂಬಂಧಪಟ್ಟವರು  ನಿರತರಾಗಿದ್ದಾರೆ. ಆದ್ದರಿಂದ ಇಂತಹ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.