ADVERTISEMENT

ಶರದ್‌ ಪವಾರ್‌ ಭೇಟಿಯಾದ ಭುಜಬಲ್‌

ಮರಾಠ ಮೀಸಲಾತಿ ಹೋರಾಟ ಕುರಿತು ಚರ್ಚೆ

ಪಿಟಿಐ
Published 15 ಜುಲೈ 2024, 15:46 IST
Last Updated 15 ಜುಲೈ 2024, 15:46 IST
ಛಗನ್ ಭುಜಬಲ್
ಛಗನ್ ಭುಜಬಲ್   

ಮುಂಬೈ: ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಅವರು ಸೋಮವಾರ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಮರಾಠ ಮೀಸಲಾತಿ ಹೋರಾಟ ಹಾಗೂ ಅದಕ್ಕೆ ಒಬಿಸಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುರಿಂದ ಉಂಟಾಗಿರುವ ವಿವಾದವನ್ನು ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಕೋರಿದರು. 

ಪವಾರ್‌ ಅವರ ಮುಂಬೈನ ಸಿಲ್ವರ್‌ ಓಕ್ ನಿವಾಸದಲ್ಲಿ ಇಬ್ಬರೂ ಸುಮಾರು ಒಂದೂವರೆ ಗಂಟೆ ಚರ್ಚಿಸಿದರು. ಒಬಿಸಿ ನಾಯಕರಾಗಿರುವ ಭುಜಬಲ್‌ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣದಲ್ಲಿದ್ದಾರೆ. ಎದುರಾಳಿ ಬಣದ ಮುಖ್ಯಸ್ಥರನ್ನು ಭೇಟಿಯಾಗಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತು.

ಲೋಕಸಭಾ ಚುನಾವಣೆ ವೇಳೆ ತಮ್ಮನ್ನು ಕಡೆಗಣಿಸಿರುವುದು ಮತ್ತು ರಾಜ್ಯಸಭೆಗೆ ಆಯ್ಕೆ ಮಾಡದೇ ಇರುವುದಕ್ಕೆ ಭುಜಬಲ್ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಶರದ್‌ ಪವಾರ್‌ ಭೇಟಿ ಬಗ್ಗೆ ಭುಜಬಲ್‌ ಅವರು ತಮ್ಮ ಪಕ್ಷದ ನಾಯಕರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದರು ಎಂಬುದು ತಿಳಿದುಬಂದಿದೆ. 

ADVERTISEMENT

ಭೇಟಿಗೆ ಸಂಬಂಧಿಸಿದಂತೆ ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್‌ ಪಟೇಲ್‌ ಅವರೊಂದಿಗೂ ಮಾತನಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಎನ್‌ಸಿಪಿ ಅಧ್ಯಕ್ಷ ಅಜಿತ್‌ ಪವಾರ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್‌ ತಟ್ಕರೆ ಅವರಿಗೂ ಮಾಹಿತಿಯಿತ್ತು ಎಂದು ಮೂಲಗಳು ತಿಳಿಸಿವೆ. 

ಶರದ್‌ ಪವಾರ್‌ ಅವರ ಭೇಟಿ ಕುರಿತು ಕೇಳಿದಾಗ ಭುಜಬಲ್, ‘ಒಬಿಸಿ ಸಮುದಾಯಕ್ಕೆ ಮೀಸಲಾತಿ ನೀಡುವ ನಿಲುವನ್ನು ಶರದ್‌ ಪವಾರ್‌ ತಳೆದಿದ್ದರು. ಈಗ ಮರಾಠ ಸಮುದಾಯ ಮತ್ತು ಒಬಿಸಿ ಸಮುದಾಯದ ಮಧ್ಯೆ ತಪ್ಪು ತಿಳಿವಳಿಕೆ ಮೂಡಿದೆ. ಈ ಸಮಸ್ಯೆ ಬಗೆಹರಿಸಲು ಪವಾರ್‌ ಅವರು ಮುಂದಾಳತ್ವ ವಹಿಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿವಾದ ಬಗೆಹರಿಸಲು ಮುಂದಿನ ದಿನಗಳಲ್ಲಿ ಯಾರನ್ನೆಲ್ಲಾ ಭೇಟಿಯಾಗುವಿರಿ ಎಂಬ ಪ್ರಶ್ನೆಗೆ, ‘ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಸೇರಿದಂತೆ ಯಾರನ್ನಾದರೂ ಭೇಟಿಯಾಗಲು ನಾನು ಸಿದ್ಧನಿದ್ದೇನೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.