ADVERTISEMENT

ಛತ್ತೀಸ್‌ಗಡ: ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ

ಸುಕ್ಮಾ, ಬಿಜಾಪುರ ಗಡಿ ಜಿಲ್ಲೆಯಲ್ಲಿ ನಕ್ಸಲ್ ದಾಳಿ

ಪಿಟಿಐ
Published 5 ಏಪ್ರಿಲ್ 2021, 7:43 IST
Last Updated 5 ಏಪ್ರಿಲ್ 2021, 7:43 IST
ಛತ್ತೀಸ್‌ಗಡದ ಎರಡು ಜಿಲ್ಲೆಗಳಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಅಂತಿಮ ನಮನ ಸಲ್ಲಿಸಿದರು.
ಛತ್ತೀಸ್‌ಗಡದ ಎರಡು ಜಿಲ್ಲೆಗಳಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಅಂತಿಮ ನಮನ ಸಲ್ಲಿಸಿದರು.   

ಜಗದಾಲ್ಪುರ: ಛತ್ತೀಸ್‌ಗಡದ ಬಸ್ತಾರ್ ಪ್ರದೇಶದಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಇಲ್ಲಿ ಗೌರವ ನಮನ ಸಲ್ಲಿಸಿದರು.

ದೆಹಲಿಯಿಂದ ಜಗದಾಲ್ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗೃಹ ಸಚಿವರು, ಇಲ್ಲಿನ ಪೊಲೀಸ್ ಲೇನ್‌ಗೆ ಭೇಟಿ ನೀಡಿ, ಹುತಾತ್ಮರಾದ 14 ಭದ್ರತಾ ಸಿಬ್ಬಂದಿಯ ಪಾರ್ಥಿವ ಶರೀರಗಳಿಗೆ ಪುಷ್ಪಗುಚ್ಛದೊಂದಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಇತರೆ ಉನ್ನತ ಮಟ್ಟದ ಅಧಿಕಾರಿಗಳು ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿದರು.

ಬಿಜಾಪುರ ಜಿಲ್ಲೆಯ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಬಿಜಾಪುರ ಪಟ್ಟಣದಲ್ಲೇ ನಡೆಸಲಾಯಿತು. ಸಾರ್ವಜನಿಕರು, ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯ ಗಡಿಭಾಗಗಳಾದ ಜೊನಗುಡ ಮತ್ತು ಟೆಕಲ್‌ಗುಡ ಹಳ್ಳಿಗಳಲ್ಲಿ ನಡೆದ ಈ ಘಟನೆಯಲ್ಲಿ 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, 31 ಮಂದಿ ಗಾಯಗೊಂಡಿದ್ದಾರೆ.

ಇದಾದ ನಂತರ, ಪೊಲೀಸ್ ಸಮನ್ವಯ ಕೇಂದ್ರದಲ್ಲಿ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಪರಿಸ್ಥಿತಿ ಕುರಿತು ಚರ್ಚೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಭೆಯ ನಂತರ ಸಚಿವರು ರಾಯಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿಯಾಗಲಿದ್ದಾರೆ. ನಂತರ ಸಂಜೆ 5.30ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.