ADVERTISEMENT

ನಕ್ಸಲ್ ನಿಗ್ರಹಕ್ಕೆ ಸಮರ್ಪಕ, ರೂಪುರೇಷೆಯಿಲ್ಲದ ಕಾರ್ಯಾಚರಣೆ: ರಾಹುಲ್‌ ಟೀಕೆ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪ

ಪಿಟಿಐ
Published 5 ಏಪ್ರಿಲ್ 2021, 6:24 IST
Last Updated 5 ಏಪ್ರಿಲ್ 2021, 6:24 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಇಪ್ಪತ್ತೆರಡು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾದ ಛತ್ತೀಸ್‌ಗಡದ ನಕ್ಸಲ್ ಕಾರ್ಯಾಚರಣೆಅಸಮರ್ಥವಾಗಿದ್ದು, ಕಾರ್ಯಾಚರಣೆಯ ರೂಪುರೇಷೆಯೂ ಸಮರ್ಪಕವಾಗಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಸೋಮವಾರ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಮ್ಮ ಯೋಧರು ಎಂದೂ ಬಂದೂಕುಗಳಿಗೆ ಆಹಾರವಾಗಿ ಸ್ವ ಇಚ್ಛೆಯಿಂದ ಹುತಾತ್ಮರಾಗುವಂತಹ ಮನಸ್ಥಿತಿಯುಳ್ಳವರಲ್ಲ‘ ಎಂದು ಹೇಳಿದ್ದಾರೆ.

‘ಕಾರ್ಯಾಚರಣೆಯಲ್ಲಿ ಗುಪ್ತದಳದ ವೈಫಲ್ಯವಿಲ್ಲ. ಘಟನೆಯಲ್ಲಿ ಯೋಧರು ಹುತಾತ್ಮರಾಗಿರುವಷ್ಟೇ ಮಾವೊವಾದಿ ಉಗ್ರರರೂ ಸತ್ತಿದ್ದಾರೆ‘ ಎಂದು ಸಿಆರ್‌ಪಿಎಫ್‌ ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆ ಹೇಳಿಕೆ ಉಲ್ಲೇಖಿಸಿದ ರಾಹುಲ್ ಗಾಂಧಿ, ‘ಗುಪ್ತದಳ ವೈಫಲ್ಯವಿಲ್ಲ, ಸತ್ತವರ ಪ್ರಮಾಣ 1:1 ಅನುಪಾತದಂತಿದೆ ಎಂದಾದರೆ ಈ ಕಾರ್ಯಾಚರಣೆಯನ್ನು ಸರಿಯಾಗಿ ರೂಪಿಸಿಲ್ಲ, ಇದೊಂದು ಅಸಮರ್ಥ ಕಾರ್ಯಾಚರಣೆ ಎಂದು ಅರ್ಥವಲ್ಲವೇ‘ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಛತ್ತೀಸ್‌ಗಡದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಸಿಆರ್‌ಪಿಎಫ್‌ನ ಯೋಧರು ಹುತಾತ್ಮರಾಗಿದ್ದರು. ಘಟನೆಯಲ್ಲಿ 31 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.