ADVERTISEMENT

ಛತ್ತೀಸ್‌ಗಢ: ನಕ್ಸಲರಿಂದ ಐಇಡಿ ಸ್ಫೋಟ; ಐವರು ಪೊಲೀಸ್‌ ಸಿಬ್ಬಂದಿ ಹುತಾತ್ಮ

ಏಜೆನ್ಸೀಸ್
Published 23 ಮಾರ್ಚ್ 2021, 14:20 IST
Last Updated 23 ಮಾರ್ಚ್ 2021, 14:20 IST
ಸ್ಫೋಟದಿಂದ ಚೆಲ್ಲಾಪಿಲ್ಲಿಯಾಗಿರುವ ವಾಹನದ ಭಾಗಗಳು–ಸಾಂದರ್ಭಿಕ ಚಿತ್ರ
ಸ್ಫೋಟದಿಂದ ಚೆಲ್ಲಾಪಿಲ್ಲಿಯಾಗಿರುವ ವಾಹನದ ಭಾಗಗಳು–ಸಾಂದರ್ಭಿಕ ಚಿತ್ರ   

ರಾಯ್‌ಪುರ್: ಛತ್ತೀಸ್‌ಗಢದಲ್ಲಿ ನಕ್ಸಲರು ನಡೆಸಿರುವ ಸುಧಾರಿತ ಸ್ಫೋಟಕ ಸಾಧನದ (ಐಇಡಿ) ಸ್ಫೋಟದಲ್ಲಿ ಐವರು ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಮಂಗಳವಾರ ನಾರಾಯಣಪುರ ಜಿಲ್ಲೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಜಿಲ್ಲಾ ಮೀಸಲು ರಕ್ಷಣಾ ಪಡೆಯ (ಡಿಆರ್‌ಜಿ) ಸಿಬ್ಬಂದಿ ಸಾಗುತ್ತಿದ್ದ ಬಸ್‌ ಸ್ಫೋಟಕ್ಕೆ ಗುರಿಯಾಗಿದ್ದು, ಐವರು ಪೊಲೀಸರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಮೀಸಲು ರಕ್ಷಣಾ ಪಡೆಯ ಸುಮಾರು 13 ಸಿಬ್ಬಂದಿ ಗಾಯಗೊಂಡಿದ್ದಾರೆ.

'ಬಸ್‌ನ ಚಾಲಕ ಸೇರಿದಂತೆ ಡಿಆರ್‌ಜಿಯ ಐದು ಮಂದಿ ಸಿಬ್ಬಂದಿ ನಕ್ಸಲರ ಐಇಡಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ' ಎಂದು ಬಸ್ತರ್‌ನ ಐಜಿ ಪಿ.ಸುಂದರ್‌ರಾಜ್‌ ಹೇಳಿದ್ದಾರೆ.

ADVERTISEMENT

ಕದೆನಾರ್‌ ಮತ್ತು ಕಂಹಾರ್‌ಗಾಂವ್‌ ನಡುವಿನ ಪ್ರದೇಶದಲ್ಲಿ ಐಇಡಿ ಸ್ಫೋಟ ಆಗಿರುವುದಾಗಿ ವರದಿಯಾಗಿದೆ. ಬಸ್‌ನಲ್ಲಿ ರಕ್ಷಣಾ ಪಡೆಯ ಒಟ್ಟು 27 ಸಿಬ್ಬಂದಿ ಇದ್ದರು. ಐಟಿಬಿಪಿ ಸಿಬ್ಬಂದಿ ಗಾಯಗೊಂಡವರನ್ನು ಸ್ಥಳದಿಂದ ಸಾಗಿಸುವ ಕಾರ್ಯ ನಡೆಸುತ್ತಿದ್ದು, ಸುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗಾಯಗೊಂಡವರನ್ನು ಭಾರತೀಯ ವಾಯು ಪಡೆಯ ಚಾಪರ್‌ಗಳ ಮೂಲಕ ಏರ್‌ಲಿಫ್ಟ್‌ ಮಾಡಲಾಗಿದೆ.

ಸ್ಫೋಟದ ಪರಿಣಾಮ ಬಸ್‌ ಸೇತುವೆಯಿಂದ ಕೆಳಕ್ಕೆ ಉರುಳಿದೆ.

'ನಕ್ಸಲ್‌ ನಿಗ್ರಹ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಿಲ್ಲಾ ಮೀಸಲು ರಕ್ಷಣಾ ಪಡೆಯ ಒಂದು ತಂಡ ಕಾರ್ಯಾಚರಣೆಯ ಬಳಿಕ ವಾಪಸಾಗುತ್ತಿದ್ದಾಗ, ಮೂರು ಐಇಡಿ ಸ್ಫೋಟಗಳು ನಡೆದಿವೆ. ಬಸ್‌ ಸೇತುವೆಯ ಸಮೀಪ ಸಾಗುವ ಸ್ಫೋಟ ನಡೆದಿದೆ. ಬಸ್‌ನ ಚಾಲಕ ಮತ್ತು ಇಬ್ಬರು ಸಿಬ್ಬಂದಿ ಸ್ಥಳದಲ್ಲಿಯೇ ಸಾವಿಗೀಡಾದರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಟ್ಟು ಐವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ' ಎಂದು ನಕ್ಸಲ್ ನಿಗ್ರಹ ಪಡೆಯ ಡಿಜಿ ಅಶೋಕ್‌ ಜುನೇಜಾ ತಿಳಿಸಿದ್ದಾರೆ.

ನಕ್ಸಲರ ಸ್ಫೋಟದಲ್ಲಿ ಯೋಧರ ಸಾವಿಗೆ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡಿರುವವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.