ಇ.ಡಿ
ರಾಯಪುರ: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಬಂಧಿಸಿದೆ.
ಚೈತನ್ಯ ಬಘೇಲ್ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 11ರ ಅಡಿ ಬಂಧಿಸಲಾಗಿದ್ದು, 5 ದಿನ ಇ.ಡಿ ವಶಕ್ಕೆ ಪಡೆದಿದೆ.
‘ದುರ್ಗಾ ಜಿಲ್ಲೆಯ ಭಿಲಾಯ್‌ನಲ್ಲಿರುವ ಭೂಪೇಶ್ ಬಘೇಲ್ ನಿವಾಸದಲ್ಲಿ ಇ.ಡಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ. ದಾಳಿಯ ಸಂದರ್ಭದಲ್ಲಿ ಚೈತನ್ಯ ಬಘೇಲ್ ಅಧಿಕಾರಿಗಳಿಗೆ ಸಹಕಾರ ನೀಡಲಿಲ್ಲ. ಅವರ ನಿವಾಸದ ಹೊರಗೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ, ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
‘ಮುಂಗಾರು ಅಧಿವೇಶನದ ಕೊನೆಯ ದಿನ ಇ.ಡಿ, ಭಿಲಾಯ್‌ನ ನಮ್ಮ ಮನೆ ಮೇಲೆ ದಾಳಿ ನಡೆಸಿದೆ. ಶುಕ್ರವಾರ ಚೈತನ್ಯ ಬಘೇಲ್ ಜನ್ಮದಿನವೂ ಆಗಿತ್ತು’ ಎಂದು ಭೂಪೇಶ್ ಬಘೇಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಬಕಾರಿ ಹಗರಣದಲ್ಲಿ ಚೈತನ್ಯ ಕೂಡ ಪಾಲುದಾರ. ಈ ಅಕ್ರಮದಲ್ಲಿ ಅವರು ₹17 ಕೋಟಿಯಷ್ಟು ಪಡೆದಿದ್ದಾರೆ. ಈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ₹2,100 ಕೋಟಿಗೂ ಹೆಚ್ಚಿನ ನಷ್ಟ ಉಂಟಾಗಿದೆ’ ಎಂದು ಇ.ಡಿ ಹೇಳಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್ ಮುಖಂಡ ಕವಾಸಿ ಲಕ್ಮಾ, ಅನ್ವರ್ ದೇಬರ್, ಮಾಜಿ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ, ಐಟಿಎಸ್ ಅಧಿಕಾರಿ ಅರುಣಪತಿ ತ್ರಿಪಾಠಿ ಮತ್ತಿತರರನ್ನು ಇ.ಡಿ ಬಂಧಿಸಿದೆ.
2019–22ರ ಅವಧಿಯಲ್ಲಿ ಛತ್ತೀಸಗಡದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಬಕಾರಿ ಹಗರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಇದುವರೆಗೆ ₹205 ಕೋಟಿ ಮೊತ್ತದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇದಕ್ಕೂ ಮುನ್ನ ಇ.ಡಿ ಚೈತನ್ಯ ಹಾಗೂ ಅವರ ತಂದೆ(ಭೂಪೇಶ್ ಬಘೇಲ್) ವಾಸವಿರುವ ಭಿಲಾಯಿ ಪಟ್ಟಣದ ಮನೆಯಲ್ಲಿ ಶೋಧ ನಡೆಸಿತ್ತು.
ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯ ಕಲೆ ಹಾಕಿರುವ ಇ.ಡಿ, ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.