
ದಂತೇವಾಡ: ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ 63 ನಕ್ಸಲರು ಶರಣಾಗಿದ್ದು, ಇವರಲ್ಲಿ 36 ಮಂದಿಯ ಸುಳಿವು ನೀಡಿದವರಿಗೆ ಒಟ್ಟು ₹1.19 ಕೋಟಿ ನಗದು ಬಹುಮಾನ ಕೊಡುವುದಾಗಿ ಪೊಲೀಸರು ಘೋಷಿಸಿದ್ದರು.
ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಿಂದ ಪ್ರಭಾವಿತರಾಗಿ ಶರಣಾದವರಲ್ಲಿ 18 ಮಹಿಳೆಯರು ಇದ್ದಾರೆ. ಇವರೆಲ್ಲರೂ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಅಧಿಕಾರಿಗಳ ಮುಂದೆ ಶಸ್ತ್ರ ತ್ಯಜಿಸಿ ಶರಣಾಗಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ಶುಕ್ರವಾರ ತಿಳಿಸಿದ್ದಾರೆ.
ಶರಣಾದ 63 ನಕ್ಸಲರಿಗೂ ತಕ್ಷಣದ ಪರಿಹಾರವಾಗಿ ತಲಾ ₹50 ಸಾವಿರ ನೀಡಲಾಗುವುದು. ಸರ್ಕಾರದ ಯೋಜನೆಯಂತೆ ಪುನರ್ವಸತಿಯನ್ನು ಕಲ್ಪಿಸಿಕೊಡಲಾಗುವುದು ಎಂದಿದ್ದಾರೆ.
ಛತ್ತೀಸಗಢದ ಬಸ್ತಾರ್‌ನ ದಕ್ಷಿಣ ಹಾಗೂ ಪಶ್ಚಿಮ ವಿಭಾಗ, ಮಾದ್ ವಿಭಾಗ ಸೇರಿದಂತೆ ಒಡಿಶಾದ ಗಡಿಯಲ್ಲಿ ಇವರೆಲ್ಲರೂ ಸಕ್ರಿಯರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಶರಣಾಗತರಾದ ಪಕ್ಲು ಅಲಿಯಾಸ್ ಪ್ರದೀಪ್ ಓಯಂ (45), ಮೋಹನ್ ಅಲಿಯಾಸ್ ಆಜಾದ್ ಕಡ್ತಿ (32), ಇವರ ಪತ್ನಿ ಸುಮಿತ್ರಾ ಅಲಿಯಾಸ್ ದ್ರೌಪದಿ ಚಾಪಾ (30), ಹಂಗಿ ಅಲಿಯಾಸ್ ರಾಧಿಕಾ ಲೆಕಮ್ (28), ಸುಖ್ರಾಮ್ ತತಿ (20), ಪಾಂಡು ಮಡ್ಕಂ (19), ಸೋಮು ಕಡ್ತಿ (21) ಅವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ, ಏಳು ನಕ್ಸಲರ ಸುಳಿವಿಗೆ ತಲಾ ₹5 ಲಕ್ಷ, 8 ಮಂದಿಯ ಮಾಹಿತಿಗೆ ತಲಾ ₹2 ಲಕ್ಷ, 11 ಕಾರ್ಯಕರ್ತರ ಸುಳಿವಿಗೆ ತಲಾ ₹1 ಲಕ್ಷ, ಮೂವರ ಮಾಹಿತಿ ನೀಡಿದವರಿಗೆ ತಲಾ ₹50 ಸಾವಿರ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.