ADVERTISEMENT

ಸ್ವಾತಂತ್ರ್ಯ ಲಭಿಸಿ 70 ವರ್ಷದ ಬಳಿಕ ವಿದ್ಯುತ್‌ ಪಡೆದ ಛತ್ತೀಸಗಡದ ಗ್ರಾಮ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 2:04 IST
Last Updated 9 ಮಾರ್ಚ್ 2019, 2:04 IST
   

ಬಲರಾಂಪುರ:ಸ್ವಾಂತಂತ್ರ್ಯ ಬಂದು 70 ವರ್ಷಗಳ ಬಳಿಕ ಛತ್ತೀಸಗಡದ ಗ್ರಾಮವೊಂದು ವಿದ್ಯುತ್‌ ಸಂಪರ್ಕ ಪಡೆದಿದೆ!

–ಹೌದು. ಇದು ನಿಜ.

ಛತ್ತೀಸಗಡದ ಬಲರಾಂಪುರ ಜಿಲ್ಲೆಯ ಝಲ್ಪಿ ಪರಾ ಗ್ರಾಮವೇ ಈಗಷ್ಟೇ ವಿದ್ಯುತ್‌ ಸಂಪರ್ಕ ಪಡೆದಿದೆ. ಅಲ್ಲಿನ ನಿವಾಸಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಸ್ವಾತಂತ್ರ್ಯ ನಂತರವೂ ಈ ಗ್ರಾಮ ವಿದ್ಯುತ್ ಸಂಪರ್ಕದಿಂದ ದೂರವೇ ಉಳಿದಿತ್ತು. ನಿವಾಸಿಗಳು ಕತ್ತಲಲ್ಲೇ ದಿನದೂಡುತ್ತಾ ಬಂದಿದ್ದಾರೆ.

ADVERTISEMENT

ಈ ಗ್ರಾಮಕ್ಕೆ ವಿದ್ಯುತ್‌ ಪೂರೈಕೆ ಇಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಎಎನ್‌ಐ ವರದಿ ಮಾಡಿದ ಕೆಲ ವಾರಗಳ ಬಳಿಕ ವಿದ್ಯುತ್ ಸಂಕರ್ಪ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.

‘ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಇಲ್ಲದೆ ನಾವು ಈಗಲೂ ಬ್ರಿಟೀಷರ ಗುಲಾಮರಂತೆ ಇದ್ದೇವು. ನಾವು ಬೇಡಿಕೆ ಇಟ್ಟರೂ ಯಾವ ಅಧಿಕಾರಿಗಳು, ಶಾಸಕರು ನಮ್ಮ ಸಮಸ್ಯೆಯನ್ನು ಕೇಳಲಿಲ್ಲ. ಮಾಧ್ಯಮಗಳು ಈ ಸಂಗತಿಯನ್ನು ಪ್ರಮುಖ ವಿಷಯವಾಗಿ ಬಿಂಬಿಸಿದ ಬಳಿಕ ಅಧಿಕಾರಿಗಳು ಗಮನಿಸಿದ್ದಾರೆ. ನಮ್ಮ ಸಮಸ್ಯೆಯನ್ನು ವರದಿ ಮಾಡಿದ ಮಾಧ್ಯಮಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಇಲ್ಲ ಎಂಬುದು ಮಾಧ್ಯಮಗಳು ವರದಿ ಮಾಡಿದ ಬಳಿಕ ನಮ್ಮ ಗಮನಕ್ಕೆ ಬಂದಿದೆ ಎಂದು ವಿದ್ಯುತ್‌ ಇಲಾಖೆ ಉಸ್ತುವಾರಿ ಎಂಜಿನಿಯರ್‌ ಆರ್‌. ನಾಮ್‌ದೇವ್‌ ಹೇಳಿದ್ದಾರೆ.

‘ಆ ಗ್ರಾಮದಲ್ಲಿ ವಿದ್ಯುತ್‌ ಇಲ್ಲ ಎಂದು ನನಗೆ ತಿಳಿದಿರಲಿಲ್ಲ. ನಿಮ್ಮ(ಮಾಧ್ಯಮ) ಮೂಲಕ ತಿಳಿದುಕೊಂಡಿದ್ದೇನೆ. ಅಲ್ಲಿಗೆ ವಿದ್ಯುತ್‌ ಪೂರೈಕೆ ಮಾಡಲು ವಿದ್ಯುತ್‌ ಪರಿವರ್ತಕವನ್ನುವರ್ಷಗಳ ಹಿಂದೆಯೇ ಅಳವಡಿಸಲಾಗಿದ್ದರೂ, ಕೆಲ ತಿಂಗಳ ಹಿಂದೆ ಮೀಟರ್ ಅಳವಡಿಸಲಾಗಿದೆ. ಆಗಲೂ ವಿದ್ಯುತ್‌ ಲಭ್ಯವಿರಲಿಲ್ಲ. ಈಗ ಪ್ರಕ್ರಿಯೆ ಪೂರ್ಣಗೊಂಡಿದೆ’ ಎಂದು ನಾಮ್‌ದೇವ್‌ ಹೇಳಿದ್ದಾರೆ.

ದೇಶದಲ್ಲಿ 18,452 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ರೂಪಿಸಿ, ಅನುಷ್ಠಾನಗೊಳಿಸಿದೆ. ಕಳೆದ ಮಾರ್ಚ್‌ ಅಂತ್ಯಕ್ಕೆ 17,181 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.