ADVERTISEMENT

ಇಂಫಾಲ ಕಣಿವೆಯಲ್ಲಿ ಜನಾಂಗೀಯ ಶುದ್ಧೀಕರಣ ಪೂರ್ಣಗೊಂಡಿದೆ: ಪಿ ಚಿದಂಬರಂ

ಪಿಟಿಐ
Published 3 ಸೆಪ್ಟೆಂಬರ್ 2023, 11:27 IST
Last Updated 3 ಸೆಪ್ಟೆಂಬರ್ 2023, 11:27 IST
<div class="paragraphs"><p>ಪಿ ಚಿದಂಬರಂ (ಚಿತ್ರ:ಪಿಟಿಐ)</p></div>

ಪಿ ಚಿದಂಬರಂ (ಚಿತ್ರ:ಪಿಟಿಐ)

   

ನವದೆಹಲಿ: ಮೈತೇಯಿ ಪ್ರಾಬಲ್ಯವಿರುವ ಇಂಫಾಲ ಕಣಿವೆಯಲ್ಲಿ ಜನಾಂಗೀಯ ಶುದ್ದೀಕರಣ (ethnic cleansing) ಪೂರ್ಣಗೊಂಡಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಆರೋ‍ಪಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಫಾಲ ಕಣಿವೆಯಲ್ಲಿ ವಾಸಿಸುತ್ತಿದ್ದ ಕೊನೆಯ 5 ಕುಕಿ ಕುಟುಂಬಗಳನ್ನು ಅಧಿಕಾರಿಗಳು ಬಲವಂತವಾಗಿ ಹೊರಹಾಕಿದ್ದಾರೆ ಎಂಬ ಮಾಧ್ಯಮ ವರದಿಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಈ ಜನಾಂಗೀಯ ಶುದ್ದೀಕರಣದ ಅಧ್ಯಕ್ಷತೆಯನ್ನು ಮಣಿಪುರ ಸರ್ಕಾರ ವಹಿಸಿಕೊಂಡಿದೆ. ಇಷ್ಟಾದರೂ ರಾಜ್ಯ ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಂಡು ಹೋಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದಕ್ಕಿಂತ ನಾಚಿಗೇಡಿನ ಸಂಗತಿ ಮತ್ತೊಂದಿಲ್ಲ’ ಎಂದು ಚಿದಂಬರಂ ಕಿಡಿಕಾರಿದ್ದಾರೆ.

ಮೇ 3ರಂದು ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದಿದ್ದು, ಇಲ್ಲಿಯವರೆಗೆ ಸುಮಾರು 160 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕುಕಿ–ಜೊ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಇಡೀ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇತ್ತೀಚೆಗೆ ನಡೆದ ಮೊದಲ ಅಧಿವೇಶನವೂ ಗದ್ದಲದ ನಡುವೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಟಟ್ಟಿದೆ.

ಮಣಿಪುರದ ಜನಸಂಖ್ಯೆಯ ಶೇ. 53 ರಷ್ಟಿರುವ ಮೈತೇಯಿ ಸಮುದಾಯದವರು ಇಂಫಾಲ ಕಣಿವೆಯಲ್ಲಿ ವಾಸಿಸಿದರೆ, ಶೇ.47ರಷ್ಟಿರುವ ನಾಗಾ ಮತ್ತು ಕುಕಿ ಸಮುದಾಯದವರು ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.