ADVERTISEMENT

ವಿಚಾರಣೆ ಎದುರಿಸುವ ಮಕ್ಕಳ ಕಾಳಜಿ ಅಗತ್ಯ: ನ್ಯಾಯಮೂರ್ತಿ ಸೂರ್ಯಕಾಂತ್‌

ಪಿಟಿಐ
Published 5 ಜುಲೈ 2025, 14:08 IST
Last Updated 5 ಜುಲೈ 2025, 14:08 IST
<div class="paragraphs"><p>ನ್ಯಾಯಮೂರ್ತಿ ಸೂರ್ಯಕಾಂತ್‌</p></div>

ನ್ಯಾಯಮೂರ್ತಿ ಸೂರ್ಯಕಾಂತ್‌

   

ಚಿತ್ರಕೃಪೆ: ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌

ಹೈದರಾಬಾದ್‌: ‘ಅಪರಾಧ ಪ್ರಕರಣಗಳ ವಿಚಾರಣೆಗಳಲ್ಲಿ ಮಕ್ಕಳನ್ನು ‘ಸಾಕ್ಷಿ’ ಎಂಬ ದೃಷ್ಟಿಯಿಂದ ಮಾತ್ರವೇ ನೋಡಲಾಗುತ್ತಿದೆ. ಇದು ಬದಲಾಗಬೇಕು. ವಿಚಾರಣೆಗೆ ಒಳಗಾಗುವ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಸೇರಿ ಅವರ ಒಟ್ಟಾರೆ ಕಾಳಜಿಯ ಬಗ್ಗೆಯೂ ಗಮನ ಕೇಂದ್ರೀಕರಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯಕಾಂತ್‌ ಅಭಿಪ್ರಾಯಪಟ್ಟರು.

ADVERTISEMENT

ಪೋಕ್ಸೊ ಕಾಯ್ದೆ ಕುರಿತು ಇಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಯಾಗುವ ಮಕ್ಕಳ ರಕ್ಷಣೆಯ ಕುರಿತು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳಾಗಬೇಕಿದೆ. ಅಪರಾಧಗಳನ್ನು ನೋಡುವ ಅಥವಾ ಅನುಭವಿಸುವ ಮಕ್ಕಳ ಆರೈಕೆ ಮಾಡದ ಹೊರತು ನಮ್ಮ ವ್ಯವಸ್ಥೆಯು ಅಪೂರ್ಣವಾಗಿಯೇ ಇರಲಿದೆ. ಘಟನೆಗಳಿಂದ ಆದ ನೋವನ್ನು ಮತ್ತೆ ಮತ್ತೆ ಕೆದಕದಂಥ ವ್ಯವಸ್ಥೆಯನ್ನು ರೂಪಿಸಬೇಕಿದೆ’ ಎಂದರು.

‘ಉದಾಹರಣೆಗೆ 10 ವರ್ಷದ ಮಗುವೊಂದು ತನಗಾದ ನೋವು, ಗಾಬರಿಯ ವಿಚಾರಗಳ ವಿವರಣೆಗಳನ್ನು ಮೊದಲಿಗೆ ಶಿಕ್ಷಕರಿಗೆ, ಪೊಲೀಸ್‌ ಅಧಿಕಾರಿಗೆ, ವೈದ್ಯಾಧಿಕಾರಿಗೆ ಬಳಿಕ ವಕೀಲರಿಗೆ ಕೊನೆಯಲ್ಲಿ ನ್ಯಾಯಾಧೀಶರಿಗೆ ನೀಡಬೇಕಾಗುತ್ತದೆ. ಪ್ರತಿಬಾರಿ ತನಗಾಗಿದ್ದನ್ನು ವಿವರಿಸುವಾಗಲೂ ಆ ಮಗುವಿನ ಧ್ವನಿಯು ಅಧೀರವಾಗುತ್ತದೆ, ಕೊನೆಗೊಮ್ಮೆ ಏನನ್ನೂ ಹೇಳಿಕೊಳ್ಳಲಾಗದ ಸ್ಥಿತಿ ತಲುಪುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಮಗುವೊಂದಕ್ಕೆ ನ್ಯಾಯದಾನ ಆರಂಭವಾಗುವುದು ನ್ಯಾಯಾಲಯದ ಕೊಠಡಿಗಳಿಂದಲ್ಲ. ಯಾವಾಗ ಆ ಮಗುವು ತಾನು ಸುರಕ್ಷಿತ ಎಂದು ಅಂದುಕೊಳ್ಳುತ್ತದೆಯೊ ಅಲ್ಲಿಂದಲೇ ನ್ಯಾಯದಾನ ಆರಂಭವಾಗುತ್ತದೆ. ನ್ಯಾಯಾಲಯದ ಕೊಠಡಿ ಅಥವಾ ಅದರಿಂದ ಹೊರಗೆ– ಹೀಗೆ ಎಲ್ಲ ಕಡೆಗಳಲ್ಲಿಯೂ ತಾನು ಸುರಕ್ಷಿತ ಎಂಬ ಭಾವ ಮಗುವಿನಲ್ಲಿ ಮೂಡಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.