ADVERTISEMENT

ಕೃಷಿಯಲ್ಲಿ ಬಾಡುತ್ತಿದೆ ಮಕ್ಕಳ ಬಾಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 20:15 IST
Last Updated 16 ಜೂನ್ 2019, 20:15 IST
...
...   

ನವದೆಹಲಿ: ದೇಶದೆಲ್ಲೆಡೆ ಬಾಲಕಾರ್ಮಿಕ ಪದ್ಧತಿ ಮುಂದುವರಿದಿದ್ದು,ಕೃಷಿ ಕ್ಷೇತ್ರವೊಂದರಲ್ಲೇ ಶೇ 60ರಷ್ಟು ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು ಚೈಲ್ಡ್ ರೈಟ್ಸ್ ಅಂಡ್ ಯು (ಸಿಆರ್‌ವೈ) ಸಂಸ್ಥೆ ಹೇಳಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹಾಗೂ ಇತ್ತೀಚಿನ ಜಾಗತಿಕ ಸೂಚ್ಯಂಕಗಳು ತಿಳಿಸಿರುವಂತೆ 10 ಬಾಲ ಕಾರ್ಮಿಕರ ಪೈಕಿ ಏಳು ಬಾಲಕಾರ್ಮಿಕರು ಕೃಷಿ ಕೆಲಸ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ಮಕ್ಕಳ ಪಾಲಿಗೆ ಶಾಪವಾದ ಬರ:ಮಹಾರಾಷ್ಟ್ರದಲ್ಲಿ ಶೇ 60.67ರಷ್ಟುಮಕ್ಕಳುಕೃಷಿ ಕ್ಷೇತ್ರದಲ್ಲಿ ದ್ದಾರೆ. ಮರಾಠವಾಡ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬರ ಆವರಿಸಿರುವ ಕಾರಣ ದೊಡ್ಡ ಪ್ರಮಾಣದ ವಲಸೆ ಕಂಡುಬಂದಿದೆ. ಪೋಷಕರ ಜತೆ ಗುಳೆ ಹೋಗುವ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಬಾಲ್ಯ ವಿವಾಹವೂ ಹೆಚ್ಚುತ್ತದೆ. ಮಕ್ಕಳು ದಿನಗೂಲಿ ಕೆಲಸಗಾರರಾಗಿ ದುಡಿಯುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.

ಲಾತೂರ್ ಹಾಗೂ ಪರ್ಭಾನಿ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದೆ. ಉದ್ಯೋಗ ಅರಸಿ ಹತ್ತಿರದ ನಗರಗಳಿಗೆ ಕುಟುಂಬಗಳು ವಲಸೆ ಹೋಗುತ್ತಿವೆ. ಕಬ್ಬು ಕಟಾವು ಅವಧಿಯಲ್ಲಿ ಹಳ್ಳಿಯಿಂದ ಹಳ್ಳಿಗೆ ‍‍‍‍ಗುಳೆ ಸಾಮಾನ್ಯವಾಗಿಬಿಟ್ಟಿದೆ. ಬಹುತೇಕ ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಣ ಮಾತ್ರ ಲಭ್ಯವಿದ್ದು, ಆ ಬಳಿಕ ಮಕ್ಕಳು ಶಾಲೆಯಿಂದ ಹೊರಗುಳಿದು ಕೃಷಿ ಸಂಬಂಧಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಣ ಕೈಗೆ ಹತ್ತುವುದರಿಂದ ಶಾಲೆ ಮುಂದುವರಿಸುವ ಗೋಜಿಗೆ ಮಕ್ಕಳು ಹೋಗುವುದಿಲ್ಲ ಎನ್ನುತ್ತದೆ ಸಿಆರ್‌ವೈ ಪಾಲುದಾರರಾದ ಸಂಕಲ್ಪ ಮಾನವ ವಿಕಾಸ ಸಂಸ್ಥೆ.

ADVERTISEMENT

ಮಕ್ಕಳಿಗೆ ಕೃಷಿ ಕೆಲಸ ಏಕೆ ಅಪಾಯಕಾರಿ?
* ಕೃಷಿ ಕ್ಷೇತ್ರವು ಜಾಗತಿಕವಾಗಿ ಎರಡನೇ ಅಪಾಯಕಾರಿ ಉದ್ಯೋಗ ಎಂದು ಪರಿಗಣಿತವಾಗಿದೆ
* ರಾಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು ಮಕ್ಕಳಿಗೆ ಅಪಾಯಕಾರಿ
* ಬೆಳೆಯುತ್ತಿರುವ ಮಕ್ಕಳ ದೇಹದ ಮೇಲೆ ಇವುಗಳಿಂದ ದೀರ್ಘಾವಧಿ ಪರಿಣಾಮ ಉಂಟಾಗುತ್ತದೆ
* ಕೀಟನಾಶಕ ಬೆರೆತ ನೀರು ಹಾಗೂ ಆಹಾರವನ್ನು ಮಕ್ಕಳು ಸೇವಿಸುವ ಅಪಾಯ ಹೆಚ್ಚಿರುತ್ತದೆ
* ನಾಟಿ ಹಾಗೂ ಕೊಯ್ಲು ವೇಳೆ ಹೆಚ್ಚು ಕೆಲಸ ಮಾಡುವ ಮಕ್ಕಳು ದೈಹಿಕವಾಗಿ ಬಳಲುತ್ತಾರೆ
* ದೀರ್ಘಾವಧಿ ಕೃಷಿ ಚಟುವಟಿಕೆಯಲ್ಲಿ ತೊಡಗುವುದರಿಂದ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತದೆ
* ಮಕ್ಕಳಿಗೆ ಶಾಲಾ ಅವಧಿಯಲ್ಲಿ ದೊರೆಯುವ ವಿರಾಮ ಇಲ್ಲಿ ಸಿಗುವುದಿಲ್ಲ

‘ಹಂಗಾಮಿ ವಸತಿಗೃಹ’ಗಳ ಪಾತ್ರ
ಮಹಾರಾಷ್ಟ್ರದಲ್ಲಿ ಕೃಷಿಯಲ್ಲಿ ತೊಡಗಿರುವ ಮಕ್ಕಳನ್ನು ಮತ್ತೆ ಶಾಲೆಗಳತ್ತ ಕರೆತರುವಲ್ಲಿ ‘ಹಂಗಾಮಿ ವಸತಿಗೃಹ’ಗಳ (ತಾತ್ಕಾಲಿಕ ವಸತಿ ಗೃಹ)ಪಾತ್ರ ಹಿರಿದು ಎನ್ನುತ್ತಾರೆ ಸಿಆರ್‌ವೈ ಜನರಲ್ ಮ್ಯಾನೇಜರ್ ಕುಮಾರ್ ನೀಲೇಂದು. ‘ಪಂಚಾಯಿತಿಗಳು, ಸ್ಥಳೀಯ ಶಾಲೆಗಳು ಹಾಗೂ ಸಿಆರ್‌ವೈ ಪಾಲುದಾರರ ಜಂಟಿ ಶ್ರಮದಿಂದಾಗಿ ಮಕ್ಕಳ ವಲಸೆ ಕಡಿಮೆಯಾಗಿದೆ. ಪೋಷಕರು ವಲಸೆ ಹೋದಾಗ, ಮಕ್ಕಳನ್ನು ಹಂಗಾಮಿ ವಸತಿಗೃಹಗಳಲ್ಲಿ ಇರಿಸಿ ಶಿಕ್ಷಣ ನೀಡುವಲ್ಲಿ ಇವರ ಯತ್ನ ಫಲ ನೀಡಿದೆ. ಸರ್ಕಾರವು ಹಂಗಾಮಿ ವಸತಿಗೃಹ ಪರಿಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಶಾಲಾ ಶಿಕ್ಷಣದಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ ಎನ್ನುವುದು ಅವರ ಮಾತು.

**
ಮಕ್ಕಳು ಕೆಲಸ ಮಾಡುವ ಹಾಗೂ ಜೀವಿಸುವ ಪರಿಸ್ಥಿತಿಗಳ ಮಧ್ಯೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ
-ಪ್ರೀತಿ ಮಹಾರಾ,ಸಿಆರ್‌ವೈ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.