ADVERTISEMENT

ಚೀನಾದ ವಿಸ್ತರಣಾ ವಾದಕ್ಕೆ ಸೆಡ್ಡು: ಇನ್ನೊಂದು ಸಮರ ಕವಾಯತು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 22:28 IST
Last Updated 31 ಮಾರ್ಚ್ 2021, 22:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಮುಂದಿನ ವಾರದಿಂದ ಆರಂಭವಾಗಲಿರುವ ಜಪಾನ್‌, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಫ್ರಾನ್ಸ್‌ ಒಳಗೊಂಡ ‘ಕ್ವಾಡ್‌’ ಕೂಟದ ಸದಸ್ಯ ರಾಷ್ಟ್ರಗಳ ಸಮರಾಭ್ಯಾಸದಲ್ಲಿ ಭಾರತವು ಭಾಗವಹಿಸಲಿದೆ.

ಇದರ ಜತೆಯಲ್ಲೇ ಚೀನಾದ ಆಕ್ರಮಣಶೀಲತೆಯನ್ನು ಎದುರಿಸಲು, ನೆರೆ ರಾಷ್ಟ್ರಗಳ ಜತೆಗಿನ ಸಂಬಂಧ ವೃದ್ಧಿಯ ದಿಕ್ಕಿನತ್ತಲೂ ಗಮನಹರಿಸಲಿದೆ. ಬಂಗಾಳ ಕೊಲ್ಲಿಯ ಸುತ್ತಲಿನ ಬಾಂಗ್ಲಾದೇಶ, ಭೂತಾನ, ಮ್ಯಾನ್ಮಾರ್‌, ನೇಪಾಳ, ಶ್ರೀಲಂಕಾ ಹಾಗೂ ಥಾಯ್ಲೆಂಡ್‌ ಒಳಗೊಂಡ ‘ಬಿಮ್ಸ್‌ಟೆಕ್‌’ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಗುರುವಾರ ವರ್ಚುವಲ್‌ ಮಾಧ್ಯಮದಲ್ಲಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಕ್ವಾಡ್‌ನಿಂದ ಆಚೆಗೂ, ಹಿಂದೂ ಮಹಾಸಾಗರ–ಪೆಸಿಫಿಕ್‌‌ ಪ್ರದೇಶದ ರಾಷ್ಟ್ರಗಳ ಜತೆಗಿನ ತನ್ನ ಬಾಂಧವ್ಯವನ್ನು ವೃದ್ಧಿಸಲು ಭಾರತ ಉತ್ಸುಕವಾಗಿದೆ. ಫ್ರಾನ್ಸ್‌ನ ನೌಕಾಪಡೆಯ ನೇತೃತ್ವದಲ್ಲಿ ಏ.5ರಿಂದ 7ರವರೆಗೆ ಆಯೋಜಿಸಲಾಗಿರುವ ‘ಲಾ ಪೆರೋಸ್‌’ ನೌಕಾ ಕವಾಯತಿನಲ್ಲಿ ಭಾರತವು ಮೊದಲಬಾರಿಗೆ ಪಾಲ್ಗೊಳ್ಳಲಿದೆ. ಜಪಾನ್‌, ಆಸ್ಟ್ರೇಲಿಯಾ ಹಾಗೂ ಅಮೆರಿಕದ ನೌಕಾಪಡೆಗಳೂ ಇಲ್ಲಿಗೆ ತಮ್ಮ ಯುದ್ಧನೌಕೆಗಳನ್ನು ಕಳುಹಿಸುತ್ತಿವೆ. ‘ಭಾರತ ನೌಕಾಪಡೆಯ ಹೊಸ ತಲೆಮಾರು ಹಾಗೂ ಹಿಂದೂ ಮಹಾಸಾಗರ–ಪೆಸಿಫಿಕ್‌‌ ಪ್ರದೇಶದ ರಾಷ್ಟ್ರಗಳ ಪ್ರತಿನಿಧಿಗಳೇ ತರಬೇತಿಯ ಕೇಂದ್ರಬಿಂದುಗಳಾಗಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ’ ಎಂದು ಫ್ರಾನ್ಸ್‌ನ ನೌಕಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಪೂರ್ವ ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್‌ ಪ್ರದೇಶದಲ್ಲಿ ಫ್ರಾನ್ಸ್‌ಗೆ ವಿಶೇಷವಾದ ಭೌಗೋಳಿಕ ಹಾಗೂ ರಾಜಕೀಯ ಹಿತಾಸಕ್ತಿಗಳಿವೆ. ಈ ಪ್ರದೇಶದಲ್ಲಿ ಫ್ರಾನ್ಸ್‌ ದೊಡ್ಡ ಪ್ರಮಾಣದಲ್ಲಿ ತನ್ನ ಸೈನಿಕರನ್ನು ನಿಯೋಜಿಸಿದೆ.

ಹಿಂದೂ ಮಹಾಸಾಗರದ ರ್‍ಯುನಿಯನ್‌ ಹಾಗೂ ಮಯೊಟೆ ದ್ವೀಪಗಳ ಮೇಲೆ ಹಾಗೂ ಪೆಸಿಫಿಕ್‌ ಸಾಗರದ ನ್ಯೂ ಕೆಲಡೋನಿಯಾ ಹಾಗೂ ಫ್ರೆಂಚ್‌ ಪೊಲಿನೇಷ್ಯಾಗಳಲ್ಲಿ ಫ್ರಾನ್ಸ್‌ನ ನಿಯಂತ್ರಣವಿದೆ. ಫ್ರಾನ್ಸ್‌ನ ವಿಶೇಷ ಆರ್ಥಿಕ ವಲಯದ ಶೇ 60ರಷ್ಟು ಭಾಗವು ಪೆಸಿಫಿಕ್‌ ಪ್ರದೇಶದಲ್ಲಿ ಹಾಗೂ ಸುಮಾರು ಶೇ 20ರಷ್ಟು ಹಿಂದೂ ಮಹಾಸಾಗರ ಪ್ರದೇಶದಲ್ಲಿದೆ. ಆಫ್ರಿಕಾದಲ್ಲಿರುವ ಜಿಬೂಟಿಯಲ್ಲಿ ಫ್ರಾನ್ಸ್‌ನ ಸೇನಾ ನೆಲೆ ಇದೆ.

ಕ್ವಾಡ್‌ ಕೂಟವನ್ನು ವಿಸ್ತರಿಸುವ ಅಮೆರಿಕದ ಪ್ರಸ್ತಾವವನ್ನು ಸ್ವೀಕರಿಸಲು ಮತ್ತು ಚೀನಾದ ವಿರುದ್ಧವಾದ ಯಾವುದೇ ಹೆಜ್ಜೆ ಇಡಲು ಫ್ರಾನ್ಸ್‌ ಆರಂಭದಲ್ಲಿ ನಿರಾಕರಿಸಿತ್ತು. ಆದರೆ, ಸ್ವಲ್ಪ ತಡವಾಗಿ ಈ ಪ್ರದೇಶದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮುಂದಾಗಿದೆ. ಪರಿಣಾಮವಾಗಿ ಈ ಭಾಗದಲ್ಲಿ ಜಂಟಿ ಸಮರಾಭ್ಯಾಸಕ್ಕೆ ಮುಂದಾಗಿದೆ.

ಗುರುವಾರದವರೆಗೂ ಕೊಚ್ಚಿಯ ಬಂದರಿನಲ್ಲಿ ತಂಗಲಿರುವ ಫ್ರಾನ್ಸ್‌ನ ಎರಡು ಯುದ್ಧನೌಕೆಗಳು ಆ ನಂತರ ಅಲ್ಲಿಂದ ಬಂಗಾಳಕೊಲ್ಲಿಯತ್ತ ಪ್ರಯಾಣ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.